ವಾತವರಣದಲ್ಲಿ ಬದಲಾವಣೆ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆ

ಬೆಂಗಳೂರು,ಫೆ.10-ನಿನ್ನೆ ಸಂಜೆ ಹಾಗೂ ರಾತ್ರಿ ರಾಜ್ಯದ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಅಕಾಲಿಕ ಮಳೆಯಾಗಿದೆ.

ವಾತಾವರಣದಲ್ಲಿ ಉಂಟಾದ ಬದಲಾವಣೆಯಿಂದ ಮೇಲ್ಮೈ ಸುಳಿ ಗಾಳಿ(ಟ್ರಪ್) ಉಂಟಾಗಿದ್ದು, ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಮಳೆಯಾಗುತ್ತಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ ರೆಡ್ಡಿ ತಿಳಿಸಿದರು.

ಮಾಲೂರಿನಲ್ಲಿ 98 ಮಿ.ಮೀನಷ್ಟು ಅಧಿಕ ಪ್ರಮಾಣದ ಮಳೆಯಾಗಿದೆ. ಬೆಂಗಳೂರಿನ ಬಸವನಗುಡಿ, ಸಂಪಂಗಿ ರಾಮನಗರದಲ್ಲೂ 60 ಮಿ.ಮೀ ಹೆಚ್ಚಿನ ಮಳೆಯಾದ ವರದಿಯಾಗಿದೆ.

ಬೆಂಗಳೂರಿನಲ್ಲಿ ಫೆಬ್ರವರಿ ತಿಂಗಳ ಸರಾಸರಿ ವಾಡಿಕೆ ಮಳೆ ಪ್ರಮಾಣ 2 ಮಿ.ಮೀ ಆಗಿದ್ದು, ಒಟ್ಟಾರೆ ಸುಮಾರು 6 ಮಿ.ಮೀನಷ್ಟು ಮಳೆಯಾಗಿದೆ. ನಿನ್ನೆ ಸಂಜೆ ಬೆಂಗಳೂರಿನ ಕೆಲವು ಭಾಗಗಳಲ್ಲಿ ಬಿದ್ದಿರುವ ಮಳೆ ದಾಖಲೆ ಪ್ರಮಾಣದ್ದಾಗಿದೆ ಎಂದರು.

ರಾಜಧಾನಿ ಬೆಂಗಳೂರು ಸೇರಿದಂತೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾದ ವರದಿಯಾಗಿದೆ. ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳಲ್ಲೂ ಭಾಗಶಃ ಮಳೆಯಾಗಿದೆ.

ಹವಾ ಮುನ್ಸೂಚನೆ ಪ್ರಕಾರ ಇಂದು ಕೂಡ ಭಾಗಶಃ ಮೋಡ ಕವಿದ ವಾತಾವರಣ ದಕ್ಷಿಣ ಒಳನಾಡಿನಲ್ಲಿ ಕಂಡುಬಂದಿದ್ದು, ಸಂಜೆ ಮಳೆಯಾಗುವ ಸಾಧ್ಯತೆ ಇದೆ. ನಾಳೆ ವೇಳೆಗೆ ಮೋಡ ಕಡಿಮೆಯಾಗಲಿದ್ದು, ವಾತಾವರಣ ಸಹಜ ಸ್ಥಿತಿಗೆ ಮರಳಲಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ