ಬೆಂಗಳೂರು, ಫೆ.10- ಶಾಸಕರನ್ನು ಖರೀದಿ ಮಾಡಲು ಹೋಗಿಲ್ಲ. ಖರೀದಿಸುವಷ್ಟು ಹಣ ನಮ್ಮ ಬಳಿ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಬಂದು ನನ್ನನ್ನು ಉಳಿಸಿ ಎಂದು ನಾನು ಯಾವುದೇ ಬಿಜೆಪಿ ಶಾಸಕರನ್ನು ಕೇಳಲಿಲ್ಲ. ಯಾರಿಗೂ ಆಮಿಷ ಒಡ್ಡಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯವರ ಬಳಿ ಸಾಕಷ್ಟು ಹಣ ವಿರಬಹುದು.ಅವರು ಖರೀದಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ವೇಚ್ಚಾಚಾರವಾಗಿ 10 ಕೋಟಿ, 20 ಕೋಟಿ ಎಂದು ಎಲ್ಲೂ ಹೇಳಿಕೊಂಡಿಲ್ಲ. ನಮ್ಮದು ಪ್ರಾದೇಶಿಕ ಪಕ್ಷವಾಗಿದ್ದು, ಮುನ್ನಡೆಸುವುದೇ ಕಷ್ಟ ಎಂದು ಹೇಳಿದ್ದಾರೆ.
ಶಾಸಕ ಸುಭಾಷ್ ಗುತ್ತೇದಾರ್ ಅವರಿಗೆ ಹಣ ನೀಡುತ್ತೇನೆ ಬನ್ನಿ ಎಂದು ಕರೆದಿಲ್ಲ. ಒಮ್ಮೆ ತಮ್ಮ ಬಳಿ ಬಂದಿದ್ದಾಗ ನೀವು ನಮ್ಮ ಪಕ್ಷದಲ್ಲೇ ಇದ್ದವರು. ಯಾರೋ ಕರೆದರು ಎಂದು ಹೋಗಿದ್ದೀರಿ. ನಮ್ಮ ಪಕ್ಷದಲ್ಲೇ ಇದ್ದಿದ್ದರೆ ಮಂತ್ರಿಯಾಗಬಹುದಿತ್ತು ಎಂದು ಹೇಳಿದ್ದೆ. ಆದರೆ, ಯಾರೊಬ್ಬರ ರಾಜಕೀಯ ಭವಿಷ್ಯ ಹಾಳು ಮಾಡುವ ವ್ಯಕ್ತಿ ನಾನಲ್ಲ ಎಂದರು.
ತಾವು ನಿನ್ನೆ ಧರ್ಮಸ್ಥಳದಲ್ಲಿ ನೀಡಿದ ಹೇಳಿಕೆಯನ್ನು ಕೆಲವು ಸುದ್ದಿವಾಹಿನಿಗಳು ತಿರುಚಿ ಪ್ರಸಾರ ಮಾಡಿವೆ ಎಂದ ಸಿಎಂ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾನು ಬಿಡುಗಡೆ ಮಾಡಿದ ಧ್ವನಿ ಸುರುಳಿ ಬಗ್ಗೆ ಮಿಮಿಕ್ರಿ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಇಂದು ಒಪ್ಪಿಕೊಂಡಿದ್ದಾರೆ. ಬಹುಶಃ ಮಂಜುನಾಥಸ್ವಾಮಿ ಬುದ್ದಿ ಕೊಟ್ಟಿರಬಹುದೆಂದು ಅಣಕವಾಡಿದರು.
ಹುಬ್ಬಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಕೇಂದ್ರ ಸರ್ಕಾರ ತಮಗೆ ಆಹ್ವಾನ ನೀಡಿಲ್ಲ. ಕೇಂದ್ರದ ಯೋಜನೆಗೆ ರಾಜ್ಯ ಸರ್ಕಾರವೂ ಹಣ ನೀಡಿದೆ. ಆದರೆ, ರಾಜ್ಯದ ಮುಖ್ಯಮಂತ್ರಿಯನ್ನು ಆಹ್ವಾನಿಸದೆ ಕಾರ್ಯಕ್ರಮ ಮಾಡುವ ಮೂಲಕ ಕೀಳುಮಟ್ಟದ ರಾಜಕಾರಣವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ದೂರಿದ್ದಾರೆ.