ಯಡಿಯೂರಪ್ಪನವರು ಇಷ್ಟು ಕೆಳಮಟ್ಟದ ರಾಜಕಾರಣ ಮಾಡಬಾರದು: ಡಿಸಿಎಂ. ಡಾ.ಜಿ.ಪರಮೇಶ್ವರ್

ತುಮಕೂರು, ಫೆ.10- ಆಪರೇಷನ್ ಕಮಲದ ಆಡಿಯೋ ರಿಲೀಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಸತ್ಯಾಂಶ ಒಪ್ಪಿಕೊಂಡಿದ್ದು ಅವರೇ ಹೇಳಿದಂತೆ ರಾಜಕೀಯದಿಂದ ನಿವೃತ್ತಿಯಾಗುತ್ತಾರಾ ಎಂದು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಪ್ರಶ್ನಿಸಿದರು.

ಡಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಶಾಸಕರನ್ನು ಸೆಳೆಯಲು ಆಪರೇಷನ್ ಕಮಲ ಮಾಡಿರುವ ಆಡಿಯೋವನ್ನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದಾಗ ಅದು ನನ್ನದಲ್ಲ ಅದನ್ನ ಸಾಬೀತು ಪಡಿಸಿದರೆ ರಾಜಕೀಯದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಹೇಳಿದ್ದ ಯಡಿಯೂರಪ್ಪನವರು ಈಗ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ.

ಈಗ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು, ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದು ಇಷ್ಟು ಕೆಳಮಟ್ಟದ ರಾಜಕಾರಣ ಮಾಡಬಾರದು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ದೇವದುರ್ಗ ಹೋದ ಸಂದರ್ಭದಲ್ಲಿ ಆಪರೆಷೀನ್ ಕಮಲ ಮಾಡಲು ಮುಂದಾಗಿ ಸಿಕ್ಕಿಬಿದ್ದಿದ್ದಾರೆ. ಅಲ್ಲಿ ನ್ಯಾಯಾಧೀಶರು, ವಿಧಾನಸಭಾಧ್ಯಕ್ಷರ ಹೆಸರು ಪ್ರಸ್ತಾಪಿಸಲಾಗಿದೆ.ಈ ಸಂಬಂಧ ಕ್ರಮ ಕೈಗೊಳ್ಳಲು ಸ್ಪೀಕರ್ ಅವರನ್ನ ಒತ್ತಾಯಿಸುತ್ತೇವೆ.

ಕಳೆದ ಚುನಾವಣೆಯಲ್ಲಿ ಯಾರಿಗೂ ಬಹುಮತ ಬರಲಿಲ್ಲ. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ನಾವು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದೇವೆ. ಇದಕ್ಕೆ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಅವಕಾಶವಿದೆ. ಆದರೆ ಬಿಜೆಪಿಯವರು ವಾಮ ಮಾರ್ಗದ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧರ್ಮಸ್ಥಳದಲ್ಲಿ ಬಿ.ಎಸ್.ಯಡಿಯೂರಪ್ಪನವರು ಬಿಡುಗಡೆ ಮಾಡಲಾಗಿರುವ ಆಡಿಯೋದಲ್ಲಿನ ಧ್ವನಿ ತಮ್ಮದಲ್ಲವೆಂದು ಸಾಬೀತು ಮಾಡಿದರೆ ಕುಮಾರಸ್ವಾಮಿ ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಣೆ ಮಾಡಿದ್ದಾರೆ.ಮುಖ್ಯಮಂತ್ರಿ ಹೀಗೆ ಹೇಳಿರುವುದರಿಂದ ಇದರಲ್ಲಿ ಸತ್ಯಾಂಶ ಇರುತ್ತದೆ ಎಂದು ಹೇಳಿದರು.

ನಮಗೆ ಬೇಕಾದ ಸಂಖ್ಯಾಬಲ ಇದೆ.ನಾವು ಬಿಜೆಪಿ ಶಾಸಕರನ್ನು ಸೆಳೆಯುವ ಅಗತ್ಯ ನಮಗಿಲ್ಲ ಎಂದು ಸ್ಪಷ್ಟಪಡಿಸಿದರು.

ತುಮಕೂರು, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ ಸಂಸದರಿಗೆ ಟಿಕೆಟ್ ಕೊಟ್ಟರೆ ಕಾಂಗ್ರೆಸ್‍ಗೆ ಹಿನ್ನಡೆಯಾಗಲಿದೆ ಎಂದು ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹೇಳಿರುವ ಬಗ್ಗೆ ನಾವು, ಜೆಡಿಎಸ್‍ನವರು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಪರಮೇಶ್ವರ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ