ಬೆಂಗಳೂರು, ಫೆ.9-ಅತೃಪ್ತ ಶಾಸಕರು ಅನಗತ್ಯವಾದ ಪ್ರಹಸನ ಸೃಷ್ಟಿಸುವ ಬದಲು ರಾಜೀನಾಮೆ ಕೊಟ್ಟು ಹೋಗಲಿ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಆಪರೇಷನ್ ಕಮಲದ ಆಡಿಯೋ ಪ್ರಕರಣವನ್ನು ತನಿಖೆಗೊಳಪಡಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಭವನದಲ್ಲಿಂದು ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲೇ ಇದ್ದು, ಸರ್ಕಾರವನ್ನು ಅಭದ್ರಗೊಳಿಸುವ ಪ್ರಯತ್ನಗಳು ಸರಿಯಲ್ಲ ಎಂದು ಹೇಳಿದರು.
ಮುಂಬೈನಲ್ಲಿರುವ ಶಾಸಕರು ಕಾಂಗ್ರೆಸ್ ಪಕ್ಷದ ಚಿಹ್ನೆಯಡಿ ಗೆದ್ದು ಬಂದಿದ್ದಾರೆ.ಮತದಾರರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು ಮತ್ತು ಧ್ಯೇಯ-ಸಿದ್ಧಾಂತಗಳಿಗಾಗಿ ಮತ ಹಾಕಿ ಗೆಲ್ಲಿಸಿದ್ದಾರೆ. ಪಕ್ಷದ ಚಿಹ್ನೆಯಡಿ ಗೆದ್ದ ಮೇಲೆ ಪಕ್ಷಕ್ಕೆ ನಿಷ್ಠರಾಗಿರಬೇಕು, ಇಲ್ಲವಾದರೆ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಹೇಳಿದರು.
ಅದನ್ನು ಬಿಟ್ಟು ದೂರದ ಊರಿನಲ್ಲಿ ಕುಳಿತು ದಿನಕ್ಕೊಂದು ರೀತಿಯ ಹೈಡ್ರಾಮಾ ಸೃಷ್ಟಿಸುವುದು ಸರಿಯಲ್ಲ. ಜನ ಕಾಂಗ್ರೆಸ್-ಜೆಡಿಎಸ್ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.ಎರಡೂ ಪಕ್ಷಗಳು ಸರ್ಕಾರ ರಚಿಸಿ ಆಡಳಿತ ನಡೆಸುತ್ತಿವೆ. ಜನ ಬೆಂಬಲ ಸಿಗದೆ ಇರುವ ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು. ಅದನ್ನುಬಿಟ್ಟು ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಸರಿಯಲ್ಲ. ಬಿಜೆಪಿಯ ರಾಷ್ಟ್ರಾಧ್ಯಕ್ಷರಾದ ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಕುಮ್ಮಕ್ಕಿ ನಿಂದಲೇ ಯಡಿಯೂರಪ್ಪ ಅವರು ಆಪರೇಷನ್ ಕಮಲ ನಡೆಸಿರುವುದು, ಶಾಸಕರ ಕುದುರೆ ವ್ಯಾಪಾರ ಸೇರಿದಂತೆ ನಾನಾ ರೀತಿಯ ಚಟುವಟಿಕೆಗಳಿಗೆ ಮುಂದಾಗಿದ್ದಾರೆ.ಇದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ಏನೇ ಪ್ರಯತ್ನ ಮಾಡಿದರೂ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಬಜೆಟ್ ಕೂಡ ಅಂಗೀಕಾರಗೊಳ್ಳುತ್ತದೆ ಎಂದು ಹೇಳಿದರು.
ಶಾಸಕಿ ಸೌಮ್ಯರೆಡ್ಡಿ, ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ, ಜಿಲ್ಲಾ ಕಾಂಗ್ರೆಸ್ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.