ನಾಳೆ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಗೆ ಪ್ರಧಾನಿ ಭೇಟಿ

ಬೆಂಗಳೂರು,ಫೆ.10-ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚಿನ ಸ್ಥಾನ ಗಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಮುಂಬೈ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಿಂದ ರಣ ಕಹಳೆ ಮೊಳಗಿಸಲಿದ್ದಾರೆ.

ನಾಳೆ ಸಂಜೆ 4 ಗಂಟೆಗೆ ಹುಬ್ಬಳ್ಳಿಯ ಗಬ್ಬೂರು ಕ್ರಾಸ್‍ನಲ್ಲಿರುವ ಕೆಎಲ್‍ಇ ಮೈದಾನದಲ್ಲಿ ಸಮಾವೇಶ ನಡೆಯಲಿದ್ದು, ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸುಮಾರು 3 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ಸಂಭವವಿದೆ.

ಇದೇ ವೇಳೆ ಪ್ರಧಾನಿಯವರು ಈ ಹಿಂದೆ ಘೋಷಣೆ ಮಾಡಿದ್ದ ಕೆಲವು ಯೋಜನೆಗಳಿಗೆ ನಾಳೆ ಅಧಿಕೃತವಾಗಿ ಚಾಲನೆ ನೀಡಿದ ನಂತರ ಸಾರ್ವಜನಿಕ ಸಮಾರಂಭವನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಬಹುದಿನಗಳ ನಂತರ ಪಕ್ಷದ ಸಮಾವೇಶದಲ್ಲಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿರುವುದರಿಂದ ಬಿಜೆಪಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕಾರ್ಯಕರ್ತರ ಹುಮ್ಮಸ್ಸನ್ನು ಇಮ್ಮಡಿಗೊಳಿಸಲಿದೆ.

ಬಿಜೆಪಿ ಮುಖಂಡ ಆರ್.ಅಶೋಕ್ ಉಸ್ತುವಾರಿಯಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಂಸದರಾದ ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಶಿವಕುಮಾರ್ ಉದಾಸಿ, ಶಾಸಕರು, ವಿಧಾನಪರಿಷತ್ ಸದಸ್ಯರು, ಪದಾಧಿಕಾರಿಗಳು ಕಳೆದ ಒಂದು ವಾರದಿಂದ ಕಾರ್ಯಕ್ರಮಕ್ಕೆ ಹಗಲಿರುಳು ಶ್ರಮಿಸುತ್ತಿದ್ದಾರೆ.

ಚುನಾವಣೆಗೆ ಕಹಳೆ:
ಲೋಕಸಭೆ ಚುನಾವಣೆಗೆ ಈ ಬಾರಿ ರಾಜ್ಯದಿಂದ ಕನಿಷ್ಠ 15ರಿಂದ 20 ಕ್ಷೇತ್ರಗಳನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ನಾಳೆಯಿಂದಲೇ ಲೋಕಸಭಾ ಮಹಾಸಮರದ ಪ್ರಚಾರಕ್ಕೆ ಅಧಿಕೃತ ಚಾಲನೆ ನೀಡಲಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಅಸ್ತಿತ್ವದಲ್ಲಿರುವುದರಿಂದ ಹೇಗಾದರೂ ಮಾಡಿ ದೋಸ್ತಿ ಪಕ್ಷಕ್ಕಿಂತ ಹೆಚ್ಚಿನ ಸ್ಥಾನ ಗಳಿಸಲು ಈಗಿನಿಂದಲೇ ಚುನಾವಣಾ ಕಾರ್ಯತಂತ್ರವನ್ನು ರೂಪಿಸುವಲ್ಲಿ ಮಗ್ನವಾಗಿದೆ. .

ಎರಡು ದಿನಗಳ ಹಿಂದೆ ಸಂಸತ್‍ನಲ್ಲಿ ಭಾಷಣ ಮಾಡಿದ್ದ ಮೋದಿ, ಕಾಂಗ್ರೆಸ್‍ಹಾಗೂ ಕರ್ನಾಟಕ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅದರಲ್ಲೂ ಸಾಲಮನ್ನಾ ಯೋಜನೆ ಕುರಿತಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಮೇಲೆ ಟೀಕೆ ಮಾಡಿದ್ದರು.

ಇದೀಗ ನಾಳೆ ಮೋದಿ ಮತ್ತೆ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ.ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ಸಂಸದರು, ರಾಜ್ಯ ಪ್ರಮುಖರು ಭಾಗವಹಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ