ಅತೃಪ್ತ ಶಾಸಕರ ವಿರುದ್ಧ ಕಾನೂನು ಕ್ರಮ: ಮೀನಾಮೇಷ ಎಣಿಸುತ್ತಿರುವ ಕಾಂಗ್ರೇಸ್

ಬೆಂಗಳೂರು, ಫೆ.9-ಆಪರೇಷನ್ ಕಮಲಕ್ಕೆ ತುತ್ತಾಗಿದ್ದಾರೆ ಎಂದು ಹೇಳಲಾದ ನಾಲ್ವರು ಅತೃಪ್ತ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕಾಂಗ್ರೆಸ್ ಮೀನಾಮೇಷ ಎಣಿಸುತ್ತಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಪ್ ನೀಡಿದ್ದರೂ. ಅದನ್ನು ಕಡೆಗಣಿಸಿ ಎರಡು ಬಾರಿ ಶಾಸಕಾಂಗ ಸಭೆಗೆ ಗೈರು ಹಾಜರಾಗಿ, ವಿಧಾನಸಭೆ ಅಧಿವೇಶನಕ್ಕೂ ಹಾಜರಾಗದೇ ಇರುವ ಶಾಸಕ ರಮೇಶ್ ಜಾರಕಿಹೊಳಿ, ನಾಗೇಂದ್ರ, ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ ವಿರುದ್ಧ ಪಕ್ಷಾಂತರ ನಿಷೇದ ಕಾಯ್ದೆ ಪರಿಚ್ಛೇದ 10ರ ಅನುಸಾರ ಕ್ರಮ ಕೈಗೊಂಡು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು, ಸಂಜೆಯೊಳಗಾಗಿ ನಾಲ್ವರು ಶಾಸಕರ ವಿರುದ್ಧ ದೂರು ನೀಡುವುದಾಗಿ ಹೇಳಿದರು ಆದರೆ ಎರಡು ದಿನ ಕಳೆದರು ಸ್ಪೀಕರ್ ಅವರಿಗೆ ದೂರ ಸಲ್ಲಿಕೆ ಆಗಿಲ್ಲ. ಮೂಲಗಳ ಪ್ರಕಾರ ನಾಲ್ವರು ಶಾಸಕರಿಗೆ ತಕ್ಕ ಪಾಠ ಕಲಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದು ಕರಾರುವಕ್ಕಾದ ಕಾನೂನಾತ್ಮಕ ಅಂಶಗಳನ್ನು ನಮೂದಿಸಿ ದೂರು ನೀಡುವ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಮುಂದಿನ ದಿನಗಳಲ್ಲಿ ಈ ಶಾಸಕರು ನ್ಯಾಯಾಲಯದ ಮೊರೆ ಹೋದರೂ ಕಾನೂನಿನಲ್ಲಿ ಯಾವುದೇ ರೀತಿ ವಿನಾಯಿತಿ ದೊರೆಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.

ಇಂದು ದೆಹಲಿ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯ ಅವರು, ಅಲ್ಲಿ ಸುಪ್ರೀಂಕೋರ್ಟ್‍ನ ಹಿರಿಯ ವಕೀಲರ ಜೊತೆ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಇನ್ನೊಂದು ಮೂಲದ ಪ್ರಕಾರ ಆಪರೇಷನ್ ಕಮಲ ಆಡಿಯೋ ಬಿಡುಗಡೆಯಾದ ನಂತರ ಇತರ ಶಾಸಕರುಗಳು ಬಿಜೆಪಿ ಜತೆ ಗುರುತಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ ಮುಂಬೈನಲ್ಲಿರುವ ಕೆಲವು ಅತೃಪ್ತ ಶಾಸಕರು ತಮ್ಮ ರಾಜಕೀಯ ಜೀವನದ ಬಗ್ಗೆ ಆತಂಕಕ್ಕೇಡಾಗಿದ್ದು , ತಾವು ಮರಳಿ ಪಕ್ಷಕ್ಕೆ ಬಂದು ಬಿಡುತ್ತೇವೆ. ದಯವಿಟ್ಟು ಕ್ರಮ ಕೈಗೊಳ್ಳಬೇಡಿ ಎಂದು ಸಿದ್ದರಾಮಯ್ಯ ಅವರು ಆಪ್ತರ ಮೂಲಕ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.

ಹೀಗಾಗಿ ಕೊನೆಯ ಬಾರಿ ಒಂದು ಅವಕಾಶ ನೀಡಲು ಸಮ್ಮತಿಸಿರುವ ಸಿದ್ದರಾಮಯ್ಯ ಅವರು ಸೋಮವಾರದವರೆಗೂ ಕಾದು ನೋಡಲು ನಿರ್ಧರಿಸಿದ್ದಾರೆ. ಸೋಮವಾರ ಸದನಕ್ಕೆ ಹಾಜರಾಗಬೇಕು ಮತ್ತು ತಮ್ಮ ಎದುರು ಹಾಜರಾಗಿ ವಿವರಣೆ ನೀಡಬೇಕು ಎಂಬ ಷರತ್ತು ವಿಧಿಸಿದ್ದಾರೆ.

ಒಂದು ವೇಳೆ ಈ ಷರತ್ತು ಪೂರೈಸಿದರೆ ಕಾನೂನು ಕ್ರಮ ಕೈಗೊಳ್ಳುವುದರಿಂದ ವಿನಾಯಿತಿ ನೀಡುವುದಾಗಿ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.ಆದರೆ ಅತೃಪ್ತ ನಾಲ್ಕು ಮಂದಿ ಶಾಸಕರು ಈ ಕ್ಷಣದವರೆಗೂ ಮುಂಬೈನಲ್ಲಿ ಬೀಡುಬಿಟ್ಟಿದ್ದು ಅವರಲ್ಲಿ ತಮ್ಮ ಮುಂದಿನ ನಡೆಯ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ