ಶಾಸಕರೊಬ್ಬರಿಗೆ ಹಣದ ಆಮಿಷವೊಡ್ಡಿರುವ ಆಡಿಯೋ ಬಹಿರಂಗ: ಗರಬಡಿದ ಪರಿಸ್ಥಿತಿಯಲ್ಲಿ ಬಿಜೆಪಿ

ಬೆಂಗಳೂರು,ಫೆ.9- ಶಾಸಕರೊಬ್ಬರಿಗೆಪಕ್ಷಸೇರುವಂತೆ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ಬಹಿರಂಗವಾಗುತ್ತಿದ್ದಂತೆ ಬಿಜೆಪಿಯಲ್ಲಿ ಗರಬಡಿದ ಪರಿಸ್ಥಿತಿ ನಿರ್ಮಾಣವಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಹಾಗೂ ಕೆಲವರು ಗುರುಮಿಟ್ಕಲ್ ಶಾಸಕ ನಾಗನಗೌಡರ ಪುತ್ರ ಶರಣಗೌಡರ ಜೊತೆ ನಡೆಸಿದ ಮಾತುಕತೆಯ ವಿವರಗಳುಳ್ಳ ಆಡಿಯೋವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬಹಿರಂಗಗೊಳಿಸುತ್ತಿದ್ದಂತೆ ಬಿಜೆಪಿಯ ಜಂಘಾಬಲವೇ ಹುದುಗಿಹೋದಂತಾಯಿತು.

ಬಜೆಟ್ ಅಧಿವೇಶನದೊಳಗೆ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಶತ ಪ್ರಯತ್ನಕ್ಕೆ ಆಡಿಯೋ ಪ್ರಕರಣ ಉಗಳಲು ಆಗದ, ನುಂಗಲೂ ಆಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಈ ಬಾರಿ ಅತ್ಯಂತ ವ್ಯವಸ್ಥಿತವಾಗಿಯೇ ಯಾರಿಗೂ ತಿಳಿಯದಂತೆ ಗುಪ್ತವಾಗಿ ಆಪರೇಷನ್ ಕಮಲ ನಡೆಸುತ್ತಿದ್ದೇವೆ ಎಂದುಕೊಂಡಿದ್ದ ಕಮಲ ನಾಯಕರು ಆಡಿಯೋ ರಿಲೀಸ್ ಆಗುತ್ತಿದ್ದಂತೆ ಇದೀಗ ಯಾರನ್ನು ನಂಬಬೇಕು, ಯಾರನ್ನು ನಂಬಬಾರದು ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

ಈ ಹಿಂದೆ ಆಪರೇಷನ್ ಕಮಲ ವಿಷಯ ಸೇರಿದಂತೆ ಪಕ್ಷದಲ್ಲಿರುವ ಕೆಲವರು ಎಲ್ಲ ವಿವರಗಳನ್ನು ಸೋರಿಕೆ ಮಾಡುತ್ತಿದ್ದರಿಂದ ಶಾಸಕರನ್ನು ಸೆಳೆಯುವ ಪ್ರಯತ್ನ ವಿಫಲಗೊಂಡಿತ್ತು.

ಈ ಬಾರಿ ಯಾರಿಗೂ ಗೊತ್ತಾಗದಂತೆ ಕೆಲವೇ ಕೆಲವು ಆಪ್ತರನ್ನು ನಂಬಿಕೊಂಡು ಯಡಿಯೂರಪ್ಪ ಆಪರೇಷನ್ ಕಮಲಕ್ಕೆ ಕೈ ಹಾಕಿದ್ದರು.ಆದರೂ ಈ ಬಾರಿಯೂ ಕಾರ್ಯಾಚರಣೆ ಕೈಕೊಟ್ಟಿರುವುದರಿಂದ ಮುಂದೆ ಏನು ಮಾಡಬೇಕೆಂದು ದಿಕ್ಕು ಕಾಣದೆ ಮಂಕು ಬಡಿದಂತೆ ಆಗಿದ್ದಾರೆ.


ಪಕ್ಷದಿಂದಲೇ ಖೆಡ್ಡ ತೋಡಿಸಿದರೆ?ಯಡಿಯೂರಪ್ಪ ಮುಖ್ಯಮಂತ್ರಿಯಾಗಬಾರದೆಂದು ಆರಂಭದಿಂದಲೂ ಅವರ ಪಕ್ಷದಲ್ಲಿರುವ ವಿರೋಧಿ ಬಣ ಕುಮಾರಸ್ವಾಮಿ ಅವರ ಜೊತೆ ಪೂರ್ವ ಸಂಚು ರೂಪಿಸಿ ವ್ಯವಸ್ಥಿತವಾಗಿ ಖೆಡ್ಡ ತೋಡಿಸಿದರೆ ಎಂಬ ಅನುಮಾನವೂ ವ್ಯಕ್ತವಾಗಿದೆ.

ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ಬಣ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರಿಗೆ ಅಧಿಕಾರ ಸಿಕ್ಕರೆ ಪಕ್ಷದಲ್ಲಿ ನಮಗೆ ಯಾವುದೇ ಸ್ಥಾನಮಾನ ಸಿಗುವುದಿಲ್ಲ ಮೂಲೆಗುಂಪಾಗಿ ಬಿಡುತ್ತೇವೆ ಎಂಬ ಭಯದಿಂದಾಗಿ ಷಡ್ಯಂತ್ರ ನಡೆಸಿರುವ ಸಾಧ್ಯತೆ ಇದೆ ಎಂಬುದು ಅನೇಕರ ಅನುಮಾನವಾಗಿದೆ.

ಗುರುವಾರ ಸಂಜೆಯವರೆಗೂ ಬೆಂಗಳೂರಿನಲ್ಲೇ ಇದ್ದ ಯಡಿಯೂರಪ್ಪ ದೇವದುರ್ಗಕ್ಕೆ ತೆರಳುವ ವಿಷಯವನ್ನು ಯಾರ ಬಳಿಯೂ ಹೇಳಿರಲಿಲ್ಲ. 5 ಗಂಟೆಯ ನಂತರ ದಿಢೀರನೆ ತಮ್ಮ ಆಪ್ತರೊಬ್ಬರಿಗೆ ದೇವದುರ್ಗಕ್ಕೆ ತೆರಳಲು ಹೆಲಿಕಾಪ್ಟರ್ ಬುಕ್ ಮಾಡುವಂತೆ ಸೂಚಿಸಿದ್ದರು.

ಈ ವಿಷಯ ದೇವದುರ್ಗದ ಶಾಸಕ ಶಿವನಗೌಡ ನಾಯಕ್ ಬಿಟ್ಟರೆ ಯಡಿಯೂರಪ್ಪನವರ ಜೊತೆ ತೆರಳುತ್ತಿದ್ದ ಆಪ್ತರಿಗೂ ಕೂಡ ಮಾಹಿತಿ ಇರಲಿಲ್ಲ.

ತಮ್ಮ ದೂರವಾಣಿಯನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಸುಳಿವು ಅರಿತಿದ್ದ ಬಿಎಸ್‍ವೈ ಇತ್ತೀಚೆಗೆ ಕೆಲವು ಗೌಪ್ಯ ವಿಷಯಗಳನ್ನು ದೂರವಾಣಿಯಲ್ಲಿ ಮಾತನಾಡುತ್ತಿರಲಿಲ್ಲ.

ಮುಖಾಮುಖಿ ಭೇಟಿಯಾದರೆ ಮಾತ್ರ ಆಪ್ತ ವಿಷಯಗಳನ್ನು ಕೆಲವೇ ಕೆಲವು ಮಂದಿಗಳ ಜೊತೆ ಹಂಚಿಕೊಳ್ಳುತ್ತಿದ್ದರೆ ಹೊರತು ಅಪ್ಪಿತಪ್ಪಿಯೂ ತುಟಿ ಬಿಚ್ಚುತ್ತಿರಲಿಲ್ಲ ಎಂದು ಆಪ್ತರೇ ಹೇಳುತ್ತಾರೆ.

ದೇವದುರ್ಗದಲ್ಲಿ ಸ್ಥಳೀಯ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ನಂತರ ಐಬಿಯಲ್ಲಿ ರಾತ್ರಿ ತಂಗಿದ್ದ ಅವರು, ಶುಕ್ರವಾರ ಬೆಳಗ್ಗೆ ಬೆಂಗಳೂರಿಗೆ ಹಿಂತಿರುಗಲು ಸಜ್ಜಾಗಿದ್ದರು.

ಗುರುಮಿಟ್ಕಲ್ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಐಬಿಗೆ ಬರುವ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಇದ್ದಕ್ಕಿದ್ದಂತೆ ಪ್ರಮುಖರೊಬ್ಬರು ನಿಮ್ಮ ಜೊತೆ ಮಾತುಕತೆ ನಡೆಸಲು ಬರುತ್ತಾರೆ ಎಂದು ಹೇಳಿದಾಗಲೇ ಗೊತ್ತಾಗಿದ್ದು.

ಆದರೆ ತಮ್ಮ ಜೊತೆ ಮಾತುಕತೆ ನಡೆಸುತ್ತಿರುವ ವ್ಯಕ್ತಿ ಮೊಬೈಲ್‍ನಲ್ಲಿ ಧ್ವನಿಮುದ್ರಿಕೆ ಮಾಡಿಕೊಳ್ಳುತ್ತಿದ್ದಾನೆ ಎಂಬುದನ್ನು ಅರಿಯದ ಬಿಎಸ್‍ವೈ ಆಪರೇಷನ್ ಕಮಲದ ಕೆಲವು ಮಾಹಿತಿಗಳನ್ನು ಶರಣಗೌಡನ ಮುಂದೆ ಬಾಯಿಬಿಡುತ್ತಿದ್ದಂತೆ ಶುಕ್ರವಾರ ಬೆಳಗ್ಗೆ ಬಿಜೆಪಿ ಬುಡ ಅಲ್ಲಾಡತೊಡಗಿತು.

ವರಿಷ್ಠರ ಸೂಚನೆಯಂತೆ ಪಕ್ಷ ಸಂಘಟನೆ, ಲೋಕಸಭೆ ಚುನಾವಣೆಗೆ ಆದ್ಯತೆ ನೀಡಿ ನಂತರ ಮುಂದುವರೆಯುವ ಬಗ್ಗೆ ತೀರ್ಮಾನಿಸಲಿದೆ ಎಂದು ಗೊತ್ತಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ