ಬೆಂಗಳೂರು,ಫೆ.8- ಬಿಜೆಪಿಯ ಆಪರೇಷನ್ ಕಮಲಕ್ಕೆ ತುತ್ತಾಗಿದ್ದಾರೆ ಎಂಬ ಗುಮಾನಿಯ ಬೆನ್ನಲ್ಲೇ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕೆ.ಆರ್.ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡ ಮುಂಬೈ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ನಾರಾಯಣಗೌಡ ಅವರು ಆಸ್ಪತ್ರೆಯ ಬೆಡ್ನಲ್ಲಿ ಮಲಗಿ ಚಿಕಿತ್ಸೆ ಪಡೆಯುತ್ತಿರುವ ವಿಡಿಯೋ ತುಣುಕು ವಾಟ್ಸಪ್ ಗ್ರೂಪ್ಗಳಲ್ಲಿ ಹರಿದಾಡುತ್ತಿದೆ.
ನನಗೆ ಆಕಸ್ಮಿಕವಾಗಿ ಫುಡ್ ಪಾಯ್ಸನ್ ಆಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಹೀಗಾಗಿ ಇಂದು ನಡೆಯಲಿರುವ ಬಜೆಟ್ ಅಧಿವೇಶನಕ್ಕೆ ನಾನು ಹಾಜರಾಗುತ್ತಿಲ್ಲ ಎಂದು ನಾರಾಯಣಗೌಡ ಅವರು ಹೇಳಿಕೊಂಡಿದ್ದಾರೆ.
ಇಂದು ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ವೈದ್ಯರು ಡಿಸ್ಚಾರ್ಜ್ ಮಾಡುತ್ತಿಲ್ಲ. ಹಾಗಾಗಿ ಇಂದು ನಾನು ಸದನಕ್ಕೆ ಹಾಜರಾಗುತ್ತಿಲ್ಲ. ಈ ವಿಚಾರವನ್ನು ಮುಖ್ಯಮಂತ್ರಿಗಳು ಹಾಗೂ ಸ್ಪೀಕರ್ ಗಮನಕ್ಕೂ ತಂದಿದ್ದೇನೆ. ಡಿಸ್ಚಾರ್ಚ್ ಆದ ಕೂಡಲೇ ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ. ಕೆಆರ್ ಪೇಟೆಗೂ ಶೀಘ್ರದಲ್ಲೇ ಬರುತ್ತೇನೆ ಎಂದು ಹೇಳಿದ್ದಾರೆ.