ಬೆಂಗಳೂರು,ಫೆ.8- ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆಪರೇಷನ್ ಕಮಲ ಸಲುವಾಗಿ ನಡೆಸಿರುವ ಸಂಭಾಷಣೆಯ ಧ್ವನಿಮುದ್ರಿಕೆಯನ್ನು ತನಿಖೆಗೊಳಪಡಿಸಲಾಗುವುದು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ತಿಳಿಸಿದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೂಡ ಇದಕ್ಕೆ ದನಿಗೂಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಸಿದ್ದರಾಮಯ್ಯನವರು, ಯಡಿಯೂರಪ್ಪನವರ ಬಂಡವಾಳ ರಾಜ್ಯದ ಜನರ ಮುಂದೆ ಬಟಾಬಯಲಾಗಿದೆ. ಆಪರೇಷನ್ ಕಮಲ ಮಾಡುವ ಸಲುವಾಗಿ ನಮ್ಮ ಶಾಸಕರನ್ನು ಸೆಳೆಯಲು ಮಾತುಕತೆ ನಡೆಸಿರುವುದು ಸ್ಪಷ್ಟವಾಗಿದೆ.ಅದು ನಕಲಿ ಎಂದು ಯಡಿಯೂರಪ್ಪ ವಾದಿಸುತ್ತಿದ್ದಾರೆ. ಅದು ಅಸಲಿಯೋ ನಕಲಿಯೋ ಎಂಬುದರ ಬಗ್ಗೆ ತನಿಖೆ ಮಾಡಿಸುತ್ತೇವೆ ಎಂದರು.
ಈ ಹಿಂದೆ ಅನಂತಕುಮಾರ್ ಮತ್ತು ಯಡಿಯೂರಪ್ಪನವರು ಹೈಕಮಾಂಡ್ಗೆ ಕಪ್ಪ ನೀಡುವುದಾಗಿ ಹೇಳಿಕೆ ನೀಡಿ ಸಿಕ್ಕಿ ಹಾಕಿಕೊಂಡಿದ್ದರು. ಈಗ ಮತ್ತೊಮ್ಮೆ ಆಪರೇಷನ್ ಕಮಲದ ವಿಷಯದಲ್ಲಿ ಬೆತ್ತಲಾಗಿದ್ದಾರೆ.ಆಡಿಯೋ ಬಗ್ಗೆ ತನಿಖೆ ಯಾವ ಸ್ವರೂಪದ್ದು ಎಂಬುದನ್ನು ನಂತರ ನಿರ್ಧರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಎಸ್ವೈ ರಾಜಿನಾಮೆ ನೀಡಲಿ:
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಆಪರೇಷನ್ ಕಮಲದ ಸಲುವಾಗಿ ಮಾತನಾಡಿರುವ ಬಿಜೆಪಿ ನಾಯಕರು, ವಿಧಾನಸಭಾಧ್ಯಕ್ಷರು ಹಾಗೂ ನ್ಯಾಯಮೂರ್ತಿಗಳಿಗೆ ಹಣದ ಆಮಿಷವೊಡ್ಡಿರುವ ವಿಷಯ ಗೊತ್ತಾಗಿದೆ.ಶಾಸಕರನ್ನು ಖರೀದಿಸುವ ವಿಷಯಗಳು ಚರ್ಚೆಯಾಗಿವೆ. ಇದು ಅತ್ಯಂತ ಗಂಭೀರ ಸ್ವರೂಪದ ಪ್ರಕರಣ.ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯದ ಪೆÇಲೀಸರೇ ಸಮರ್ಥರಿದ್ದಾರೆ. ಸಿಬಿಐ ಅಗತ್ಯವಿಲ್ಲ.ಸಿಬಿಐ ಈಗ ಯಾವ ರೀತಿ ನಡೆದುಕೊಳ್ಳುತ್ತಿದೆ ಎಂದು ದೇಶದ ಜನತೆಗೆ ಗೊತ್ತಿದೆ ಎಂದು ಅವರು ಹೇಳಿದರು.