ನಾಡಿನ ಜನತೆಗೆ ಭರಪೂರ ಕೊಡುಗೆಗಳನ್ನು ಪ್ರಕಟಿಸಿದ ಸಿಎಂ ಕುಮಾರಸ್ವಾಮಿ

ಬೆಂಗಳೂರು,ಫೆ.8- ರೈತರು, ಮಹಿಳೆಯರು, ಮಧ್ಯಮವರ್ಗದವರು, ಹಿರಿಯ ನಾಗರಿಕರು, ಆಶಾ ಕಾರ್ಯಕರ್ತೆಯರು, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು, ಅಲ್ಪಸಂಖ್ಯಾತರು ಸೇರಿದಂತೆ ಶ್ರೀಸಾಮಾನ್ಯನ ಓಲೈಕೆ ದೃಷ್ಟಿಯಿಂದ ಯಾವುದೇ ಹೊರೆಯಾಗದಂತೆ ಜನಾಕರ್ಷಣಾ ಬಜೆಟ್‍ನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ್ದಾರೆ.

ಪ್ರತಿಪಕ್ಷ ಸದಸ್ಯರ ಪ್ರತಿಭಟನೆ ನಡುವೆಯೂ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದ 2ನೇ ಬಜೆಟ್‍ನ್ನು ಇಂದು ಮಂಡಿಸಿ ನಾಡಿನ ಜನತೆಗೆ ಭರಪೂರ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

ವಿರೋಧ ಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ಎಂಬಂತೆ ರೈತರ ಸಾಲಮನ್ನಾ ಮಾಡಿಯೇ ತೀರುತ್ತೇವೆ ಎಂದು ಪ್ರಕಟಿಸಿರುವ ಎಚ್‍ಡಿಕೆ, ಇದಕ್ಕಾಗಿ ಎಷ್ಟೇ ಸಮಸ್ಯೆಗಳು ಎದುರಾದರೂ ಒಂದು ಟೈಮ್ ಸೆಟ್ಲಮೆಂಟ್‍ನಿಂದ ಹಿಂದೆ ಸರಿಯುವುದಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಿ ಆರ್ಥಿಕ ಶಿಸ್ತಿನ ಇತಿಮಿತಿಯೊಳಗೆ ಸಾಲಮನ್ನಾ ಮಾಡಲಿದ್ದೇವೆ ಎಂದು ತಿಳಿಸಿದರು.

ಈವರೆಗೂ ಸಾಲಮನ್ನಾ ಯೋಜನೆಯಡಿ ವಾಣಿಜ್ಯ ಬ್ಯಾಂಕ್ ಹಾಗೂ ಸಹಕಾರಿ ಬ್ಯಾಂಕ್‍ನಡಿ ರೈತರ ಖಾತೆಗಳಿಗೆ 5450 ಕೋಟಿ ಹಣವನ್ನು ಬಿಡಗುಡೆ ಮಾಡಲಾಗಿದೆ.

ಸಹಕಾರಿ ಬ್ಯಾಂಕ್‍ಗಳ 2 ಲಕ್ಷ ಖಾತೆಗಳ 1027 ಕೋಟಿ, ಹಾಗೂ ವಾಣಿಜ್ಯ ಬ್ಯಾಂಕ್‍ಗಳ 1.9 ಲಕ್ಷ ಸಾಲ ಖಾತೆಗಳ 843 ಕೋಟಿ ರೂ. ಬಿಡುಗಡೆ ಮಾಡಲಾಗಿದೆ.

ತೆರಿಗೆದಾರರ ಹಣ ಪೆÇೀಲಾಗದಂತೆ ಸರ್ಕಾರ ಎಚ್ಚರಿಕೆ ವಹಿಸಿದ್ದು, ರೈತರ ಖಾತೆಗಳಿಗೆ ನೇರವಾಗಿ ಸಾಲಮನ್ನಾದ ಹಣವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದು ದೇಶದಲ್ಲೇ ಅತ್ಯಂತ ಪಾರದರ್ಶಕ ಯೋಜನೆಯಾಗಿದೆ ಎಂದು ಸಮರ್ಥಿಸಿಕೊಂಡರು.

ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಕುಮಾರಸ್ವಾಮಿಯವರು, ಯಾವುದೇ ಹೊಸ ತೆರಿಗೆಗಳನ್ನು ಈ ಬಾರಿ ಜಾರಿ ಮಾಡಿಲ್ಲ. ಬದಲಿಗೆ ಸರ್ಕಾರದ ಬೊಕ್ಕಸಕ್ಕೆ ಉಂಟಾಗಲಿರುವ ಹೊರೆಯನ್ನು ತಗ್ಗಿಸಲು ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಮದ್ಯಪ್ರಿಯರಿಗೆ ಇನ್ನಷ್ಟು ಕಿಕ್ ಹೊಡೆಸಿದ್ದಾರೆ.

ಸಂಧ್ಯಾ ಸುರಕ್ಷಾ ಯೋಜನೆಯಡಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ಮಾಸಾಶನವನ್ನು 600ರಿಂದ 1000ಕ್ಕೆ ಹೆಚ್ಚಿಸಿರುವುದರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರ ಮಾಸಾಶನವನ್ನು 500 ರೂ. ಏರಿಕೆ ಮಾಡಿ ಮಹಿಳಾ ಸಮುದಾಯವನ್ನು ಸಂತೃಪ್ತಿಪಡಿಸಿದ್ದಾರೆ.

ಗ್ರಾಮೀಣ ಭಾಗದ ರೈತರನ್ನು ಓಲೈಕೆ ಮಾಡುವ ನಿಟ್ಟಿನಲ್ಲಿ ಒಂದು ಲೀಟರ್ ಹಾಲಿನ ಪ್ರೋತ್ಸಾಹಧನ 1 ರೂ.ಗೆ ಏರಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಇನ್ನು ಮುಂದೆ ಪ್ರತಿ ಲೀಟರ್ ಹಾಲಿಗೆ 6 ರೂ. ಪ್ರೋತ್ಸಾಹಧನ ಸಿಗಲಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ ಎಂಬ ಆರೋಪಕ್ಕೆ ಪ್ರತ್ಯುತ್ತರ ಎಂಬಂತೆ ಗದಗ, ಹಾವೇರಿ, ಕುಂದಗೋಳ, ಹುಬ್ಬಳ್ಳಿ ಹಾಗೂ ಅಣ್ಣಗೇರಿಯಲ್ಲಿ ಮೆಣಸು ಮತ್ತು ಹೆಸರುಬೇಳೆಗಳ ಗುಣ ವಿಶ್ಲೇಷಣೆ ಮತ್ತು ಸಂಸ್ಕರಣಾ ಘಟಕ ಸ್ಥಾಪಿಸಲು 160 ಕೋಟಿ ರೂ. ಅನುದಾನವನ್ನು ಘೋಷಿಸಿದ್ದಾರೆ.

ಇದೇ ವೇಳೆ ಈ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಭರಪೂರ ಹಣವನ್ನು ನೀಡಲಾಗಿದೆ.

ಕರಾವಳಿ ಭಾಗಕ್ಕೂ ಆದ್ಯತೆ ನೀಡಿರುವ ಸಿಎಂ, ಮೀನುಗಾರಿಕೆ ದೋಣಿಗಳಿಗೆ ಇಸ್ರೋ ಅಧಿಕೃತಗೊಳಿಸಿರುವ ಉಪಕರಣಗಳನ್ನು ಅಳವಡಿಸಲು ಶೇ.50ರಷ್ಟು ಸಹಾಯಧನ ನೀಡಲು 50 ಕೋಟಿ, ಸೀಗಡಿಮತ್ತು ಮೀನು 400 ಘಟಕಗಳಿಗೆ 2 ಕೋಟಿ ರೂ. ಅನುದಾನ, ಮತ್ಸ್ಯಾಶ್ರಯ ಯೋಜನೆಯಡಿ 2500 ಮನೆ ನಿರ್ಮಾಣ, ಡೀಸೆಲ್ ಮತ್ತು ಸೀಮೆಎಣ್ಣೆ ಪಾಸ್‍ಬುಕ್ ಪಡೆದಿರುವ ದೋಣಿಗಳಿಗೆ ಸಬ್ಸಿಡಿ ನೀಡಲು 148.5 ಕೋಟಿ ಅನುದಾನ ಮೀಸಲಿರಿಸಿದ್ದಾರೆ.

ಶಾಶ್ವತ ಬರಪೀಡಿತ ಎಂಬ ಹಣಪಟ್ಟಿ ಹೊತ್ತಿರುವ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆಯನ್ನು ಕಾಲಮಿತಿಯೊಳಗೆ ಅನುಷ್ಠಾನ ಮಾಡುವ ಭರವಸೆಯನ್ನು ನೀಡಿದ್ದಾರೆ.

ಜೆಡಿಎಸ್‍ನ ಭದ್ರಕೋಟೆ ಎನಿಸಿರುವ ಹಳೆ ಮೈಸೂರು ಭಾಗಕ್ಕೂ ಸಿಂಹಪಾಲು ನೀಡಲಾಗಿದೆ. ರಾಮನಗರದಲ್ಲಿ ಮಾವು ಉತ್ಪನ್ನಗಳ ಸಂಸ್ಕರಣಾ ಘಟಕ, ಮಂಡ್ಯ ಜಿಲ್ಲೆಯ ವಿಸಿ ಫಾರಂನ ಕೃಷಿ ಪ್ರಾತ್ಯಕ್ಷಿಕೆ ಸಂಸ್ಥೆ ಸ್ಥಾಪನೆಗೆ 10 ಕೋಟಿ ರೂ. ಚಾಮರಾಜನಗರ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ 5 ಕೋಟಿ, ಸಂತೆಮರಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣ ಮತ್ತು ಯುವಕರಿಗೆ ತರಬೇತಿ ನೀಡಲು 2 ಕೋಟಿ, ರಾಮನಗರದಲ್ಲಿರುವ ರೇಷ್ಮೆ ಮಾರುಕಟ್ಟೆ ಆಧುನೀಕರಣ ಮತ್ತು ಬಲವರ್ಧನೆಗೆ 10 ಕೋಟಿ, ಚನ್ನಪಟ್ಟಣದ ರೇಷ್ಮೆ ವಲಯದ ಸಾಧನಗಳ ಪ್ರದರ್ಶನ ಮತ್ತು ರೇಷ್ಮೆ ಉತ್ಪನ್ನಗಳ ಅಭಿವೃದ್ಧಿಗೆ 10 ಕೋಟಿ ರೂ. ಒದಗಿಸಲಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ