ನನ್ನ ಧ್ವನಿ ಎಂಬುದು ಸಾಬೀತಾದರೆ ಸಕ್ರೀಯ ರಾಜಕಾರಣದಿಂದ ನಿವೃತ್ತಿ: ವಿರೋಧ ಪಕ್ಷ ನಾಯಕ ಯಡಿಯೂರಪ್ಪ

ಬೆಂಗಳೂರು, ಫೆ.8-ಮುಖ್ಯಮಂತ್ರಿ ಕುಮಾರಸ್ವಾಮಿ ಮೂಲತಃ ಚಲನಚಿತ್ರ ರಂಗದಿಂದ ಬಂದವರು ನನ್ನ ಆಡಿಯೋ ಧ್ವನಿಯನ್ನು ಸೃಷ್ಟಿ ಮಾಡಿರುವ ಸಾಧ್ಯತೆ ಇದೆ.ಒಂದು ವೇಳೆ ಆಡಿಯೋದಲ್ಲಿ ಇರುವುದು ನನ್ನ ದನಿ ಎಂಬುದು ಸಾಬೀತಾದರೆ ಶಾಸಕ ಸ್ಥಾನಕ್ಕೆ ಮಾತ್ರವಲ್ಲದೆ 24 ಗಂಟೆಯೊಳಗೆ ಸಕ್ರಿಯ ರಾಜಕಾರಣದಿಂದಲೇ ನಿವೃತ್ತಿ ಘೋಷಣೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿರುಗೇಟು ನೀಡಿದ್ದಾರೆ.

ವಿಧಾನಸೌಧದ ತಮ್ಮ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ, ನಾನಾಗಲಿ, ನಮ್ಮ ಪಕ್ಷದ ಮುಖಂಡರಾಗಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಯಾವುದೇ ರೀತಿಯ ಆಮಿಷ ಒಡ್ಡಿಲ್ಲ. ಕುಮಾರಸ್ವಾಮಿ ಇಂತಹ ಕಥೆ ಕಟ್ಟುವುದರಲ್ಲಿ ನಿಸ್ಸೀಮರು. ಸರ್ಕಾರದಲ್ಲಿ ಉಂಟಾಗಿರುವ ಗೊಂದಲವನ್ನು ಬೇರೆಡೆ ಸೆಳೆಯಲು ಈ ಆಡಿಯೋ ನಾಟಕವನ್ನು ಸೃಷ್ಟಿಸಿದ್ದಾರೆ.ಇದು ಸಂಪೂರ್ಣ ಆಧಾರ ರಹಿತ ಆರೋಪ ಎಂದು ಕಿಡಿಕಾರಿದರು.

ಶಾಸಕ ಶಿವನಗೌಡ ನಾಯಕ್ ಮತ್ತು ನಾನು, ಶಾಸಕರೊಬ್ಬರ ಪುತ್ರನ ಜತೆ ಮಾತುಕತೆ ನಡೆಸಿ ಹಣದ ಆಮಿಷ ಒಡ್ಡಿದ್ದೇನೆ ಎಂಬುದು ಕುಮಾರಸ್ವಾಮಿಯ ಹತಾಶೆಯ ಪ್ರತೀಕ. ಸರ್ಕಾರ ಬಹುಮತ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಈ ರೀತಿ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಜಂಟಿ ಅಧಿವೇಶನಕ್ಕಾಗಲಿ ಇಲ್ಲವೇ ಇಂದು ಮಂಡನೆಯಾಗುತ್ತಿರುವ ಬಜೆಟ್ ಸಂದರ್ಭದಲ್ಲಿ ದೋಸ್ತಿ ಸರ್ಕಾರದ ಅನೇಕ ಶಾಸಕರು ಸದನಕ್ಕೆ ಬಂದಿಲ್ಲ.

ಸರ್ಕಾರದಲ್ಲಿರುವ ಹುಳುಕುಗಳನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಇಂದನ್ನೆಲ್ಲಾ ನಂಬಲು ಜನ ದಡ್ಡರೆ ಎಂದು ಪ್ರಶ್ನಿಸಿದರು.
ನಮ್ಮ ಪಕ್ಷದ ಶಾಸಕರಾದ ಸುಭಾಷ್ ಗುತ್ತೇದಾರ್ ಅವರಿಗೆ ಕುಮಾರಸ್ವಾಮಿ ಪಕ್ಷ ಬಿಟ್ಟು ಬಂದರೆ ಮಂತ್ರಿ ಸ್ಥಾನ ನೀಡುವುದಾಗಿ ಆಮಿಷ ಒಡ್ಡಿದ್ದರು.

2010ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದ ವೇಳೆ ನಮ್ಮ ಪಕ್ಷದ 16 ಶಾಸಕರನ್ನು ಗೋವಾಕ್ಕೆ ಕರೆದುಕೊಂಡು ಹೋದವರು ಯಾರು ?ನಮಗೆ ನೈತಿಕ ಪಾಠ ಹೇಳುವ ಕುಮಾರಸ್ವಾಮಿ ಮೊದಲು ನೈತಿಕತೆ ಉಳಿಸಿಕೊಂಡಿದ್ದಾರೆಯೇ ಎಂದು ಕೆಂಡಾಮಂಡಲವಾದರು.

ಮುಂದೆ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಸೂಚ್ಯವಾಗಿ ಹೇಳಿದ ಅವರು, 15ರಿಂದ 20 ಶಾಸಕರು ಎಲ್ಲಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷದ ಶಾಸಕರೇ ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಬೇರೆಯವರ ಬಗ್ಗೆ ಆರೋಪ ಮಾಡುವ ಬದಲು ನಿಮ್ಮ ಪಕ್ಷದ ಆಂತರಿಕ ಭಿನ್ನಾಭಿಪ್ರಾಯವನ್ನು ಸರಿಮಾಡಿಕೊಳ್ಳಿ.ಆಧಾರ ರಹಿತವಾಗಿ ಆರೋಪ ಮಾಡಬೇಡಿ ಎಂದು ಗುಡುಗಿದರು.

ಸಮ್ಮಿಶ್ರ ಸರ್ಕಾರ ಸಂಪೂರ್ಣವಾಗಿ ಜನರ ಹಿತ ಮರೆತು ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದೆ.ರಾಜ್ಯದ ಅನೇಕ ತಾಲ್ಲೂಕುಗಳಲ್ಲಿ ಬರಗಾಲವಿದ್ದರೂ ಒಬ್ಬ ಸಚಿವರಾಗಲಿ, ಇಲ್ಲವೇ ಸಂಬಂಧಪಟ್ಟ ಅಧಿಕಾರಿಗಳು ಪ್ರವಾಸ ಕೈಗೊಳ್ಳದೆ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ. ಇಂತಹವರು ಬೇರೆ ಪಕ್ಷದವರ ಬಗ್ಗೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಆಕ್ಷೇಪಿಸಿದರು.

ಸಮ್ಮಿಶ್ರ ಸರ್ಕಾರ ತನ್ನ ಆಂತರಿಕ ಕಚ್ಚಾಟದಿಂದಲೇ ಬಿದ್ದು ಹೋಗುತ್ತದೆ. ನಾವು ಸರ್ಕಾರದ ವಿರುದ್ಧ ಅವಿಶ್ವಾಸ ಮಂಡಿಸುವ ಅಗತ್ಯವಿಲ್ಲ. ಸರ್ಕಾರದ ಮೇಲೆ ವಿಶ್ವಾಸವಿಲ್ಲ ಎಂದ ಮೇಲೆ ಅವಿಶ್ವಾಸ ನಿರ್ಣಯ ಮಂಡಿಸುವ ಅಗತ್ಯವಾದರೂ ಏನು ಎಂದು ಪ್ರಶ್ನಿಸಿದರು.

ಬಜೆಟ್ ಮಂಡನೆಗೆ ನಾವು ಯಾವುದೇ ರೀತಿಯಿಂದಲೂ ಅಡ್ಡಿ ಪಡಿಸುವುದಿಲ್ಲ. ಚರ್ಚೆ ನಡೆಸಲು ಇನ್ನೂ ಮೂರು ದಿನಗಳ ಕಾಲ ಅವಕಾಶ ಕಲ್ಪಿಸಬೇಕೆಂದು ಸ್ಪೀಕರ್‍ಗೆ ಮನವಿ ಮಾಡಿದ್ದೇವೆ. ತರಾತುರಿಯಲ್ಲಿ ಮಸೂದೆಗಳನ್ನು ಮಂಡನೆ ಮಾಡಿಕೊಂಡು ಹೋಗಬೇಕಾದ ಅಗತ್ಯವಿಲ್ಲ. ಪ್ರತಿಪಕ್ಷದವರೇ ಚರ್ಚೆಗೆ ಸಿದ್ದರಿರುವಾಗ ಆಡಳಿತ ಪಕ್ಷ ಏಕೆ ಹೆದರಬೇಕು ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ