ಬೆಂಗಳೂರು, ಫೆ.8- ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಆಪರೇಷನ್ ಕಮಲಕ್ಕೆ ಈವರೆಗೂ ತಾತ್ವಿಕವಾಗಿ ಪ್ರತಿಕ್ರಿಯಿಸುತ್ತಿದ್ದ ಜೆಡಿಎಸ್-ಕಾಂಗ್ರೆಸ್ ಪಕ್ಷಗಳು ಏಕಾಏಕಿ ತಿರುಗಿ ಬಿದಿದ್ದು, ಬಿಜೆಪಿ ವಿರುದ್ಧ ಆಕ್ರಮಣಕಾರಿ ದಾಳಿ ಆರಂಭಿಸಿವೆ.
ನಾಲ್ವರು ಕಾಂಗ್ರೆಸ್ನ ಅತೃಪ್ತ ಶಾಸಕರನ್ನು ಮುಂಬೈನಲ್ಲಿ ಕೂಡಿಟ್ಟುಕೊಂಡು ಇನ್ನಷ್ಟು ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿರುವ ಬಿಜೆಪಿ ವಿರುದ್ಧ ಇಂದು ಜೆಡಿಎಸ್-ಕಾಂಗ್ರೆಸ್ ಹಲವು ದಿಕ್ಕುಗಳಿಂದಲೂ ಪ್ರತಿ ದಾಳಿ ನಡೆಸಿವೆ.
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಆಪರೇಷನ್ ಕಮಲದ ಆಡಿಯೋ ಬಿಡುಗಡೆ ಮಾಡಿದ್ದಲ್ಲದೆ, ಜೆಡಿಎಸ್ ಶಾಸಕರನ್ನು ಸೆಳೆಯಲು ಬಿಜೆಪಿಯವರು ಕುಟುಂಬದ ಸದಸ್ಯರನ್ನು ಸಂಪರ್ಕಿಸಿ ನಡೆಸಿದ ಮಾತುಕತೆಯ ಪ್ರತ್ಯಕ್ಷ ಸಾಕ್ಷಿಯನ್ನು ಪತ್ರಿಕಾಗೋಷ್ಠಿಯಲ್ಲಿ ಹಾಜರುಪಡಿಸಿದರು.
ಮತ್ತೊಂದೆಡೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಅವರು ಕಾಂಗ್ರೆಸ್ ಶಾಸಕಾಂಗ ಸಭೆ ನಡೆಸಿ ಬಹುತೇಕ ಎಲ್ಲಾ ಶಾಸಕರನ್ನು ಕರೆಸಿದ್ದಲ್ಲದೆ, ಬಿಜೆಪಿಯ ಜತೆ ಕೈ ಜೋಡಿಸದಂತೆ ಕಠಿಣ ಎಚ್ಚರಿಕೆ ನೀಡಿದರು.
ನಡುವೆ ಕೆಲವುಶಾಸಕರು ತಾವು ಬಿಜೆಪಿ ಜತೆ ಹೋಗುವುದಿಲ್ಲ ಎಂದು ಭರವಸೆ ನೀಡಿರುವುದರ ಜತೆಗೆ ಕಾಂಗ್ರೆಸ್ ಒಳಗಿನ ತಾರತಮ್ಯವನ್ನು ಸರಿಪಡಿಸಬೇಕು ಎಂಬ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಜೆಡಿಎಸ್ ಕೂಡ ಶಾಸಕಾಂಗ ಸಭೆ ನಡೆಸಿ ತನ್ನ ಶಾಸಕರ ತಲೆ ಎಣಿಕೆ ನಡೆಸಿ ಗೈರು ಹಾಜರಾದವನ್ನು ಗುರುತಿಸಿದ್ದಲ್ಲದೆ, ಅವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ. ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಆಪರೇಷನ್ ಕಮಲ ಮತ್ತು ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳಿಗೆ ಸಮಾಧಾನದಿಂದಲೇ ಪ್ರತಿಕ್ರಿಯಿಸುತ್ತಲೇ ಬಂದಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಏಕಾಏಕಿ ರೊಚ್ಚಿಗೆದ್ದಿವೆ.
ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವುದಾಗಿ ಹೇಳುತ್ತಾ ಆಪರೇಷನ್ ಕಮಲ ನಡೆಸುತ್ತಿದ್ದ ಬಿಜೆಪಿಯವರು ಒಳಗೊಳಗೆ ವಿಧಾನಸಭಾಧ್ಯಕ್ಷರನ್ನು ಬದಲಾವಣೆ ಮಾಡುವ ಹುನ್ನಾರ ನಡೆಸಿದ್ದಾರೆ ಎಂಬ ಮಾಹಿತಿ ದೋಸ್ತಿ ಪಕ್ಷಗಳಿಗೆ ಸಿಕ್ಕದೆ.
ಸಮ್ಮಿಶ್ರ ಸರ್ಕಾರಕ್ಕೆ ಆಪತ್ಕಾಲದಲ್ಲಿ ರಕ್ಷಕರಂತಿರುವ ಸ್ಪೀಕರ್ ಅವರ ಸ್ಥಾನವನ್ನೇ ಬದಲಾವಣೆ ಮಾಡುವ ತಂತ್ರಗಾರಿಕೆಯ ಸುಳಿವು ಸಿಗುತ್ತಿದ್ದಂತೆ ಸಿಟ್ಟಿಗೆದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಬಿಜೆಪಿ ವಿರುದ್ಧ ಆಕ್ರಮಣಕಾರಿ ರಾಜಕೀಯ ಆರಂಭಿಸಿದ್ದಾರೆ.
ಸದನದಲ್ಲಿ ರಾಜ್ಯಪಾಲರ ಜಂಟಿ ಅಧಿವೇಶನದ ಭಾಷಣಕ್ಕೆ ಅಡ್ಡಿ ಪಡಿಸಿದ್ದ ಬಿಜೆಪಿ, ಬಜೆಟ್ ಮಂಡನೆಗೂ ಅಡ್ಡಿಪಡಿಸಿತ್ತು.ರಾಜ್ಯಪಾಲರ ವಂದನಾ ನಿರ್ಣಯಕ್ಕೂ ಅಡ್ಡಿಪಡಿಸುವ ಪ್ರಯತ್ನ ನಡೆಸಿತ್ತು. ಬಜೆಟ್ ಅಂಗೀಕಾರಗೊಳ್ಳದಂತೆ ನೋಡಿಕೊಂಡು ಸಮ್ಮಿಶ್ರ ಸರ್ಕಾರಕ್ಕೆ ಬಹುಮತ ಇಲ್ಲ ಎಂದು ಸಾಬೀತುಪಡಿಸುವ ಬಿಜೆಪಿಯ ತಂತ್ರಗಾರಿಕೆಗೆ ತಿರುಗೇಟು ನೀಡಲು ದೋಸ್ತಿ ಪಕ್ಷಗಳು ಶಾಸಕಾಂಗ ಸಭೆ ನಡೆಸಿವೆ.
ನಿರೀಕ್ಷೆಯಂತೆ ಕಾಂಗ್ರೆಸ್ನ ಐದು ಮಂದಿ ಶಾಸಕರು ಗೈರು ಹಾಜರಾಗಿದ್ದಾರೆ.ಉಳಿದಂತೆ ಬಹುತೇಕ ಎಲ್ಲಾ ಶಾಸಕರು ಹಾಜರಾಗಿದ್ದು, ತಾವು ಸಮ್ಮಿಶ್ರ ಸರ್ಕಾರಕ್ಕೆ ಬದ್ಧರಾಗಿರುವುದಾಗಿ ಭರವಸೆ ನೀಡಿದ್ದಾರೆ.ಗೈರು ಹಾಜರಾಗಿರುವ ಬಂಡಾಯ ಶಾಸಕರಿಗೆ ಪಕ್ಷಾಂತರ ನಿಷೇಧ ಕಾಯ್ದೆಯ ಮೂಲಕ ಕಾನೂನಿನ ಬಿಸಿ ಮುಟ್ಟಿಸಲು ನಿರ್ಧರಿಸಲಾಗಿದೆ.
ಈವರೆಗೂ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವುದಿಲ್ಲ ಎಂದು ಹೇಳುತ್ತಲೇ ಒಳಗೊಳಗೆ ಶಾಸಕರ ಖರೀದಿಗೆ ಕುದುರೆ ವ್ಯಾಪಾರ ನಡೆಸಿತ್ತು.ಬಹಳ ಹಿಂದಿನಿಂದಲೂ ಸಾಕ್ಷ್ಯಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದ ಮಿತ್ರ ಪಕ್ಷಗಳು ಸಮಾಧಾನದಿಂದಲೇ ವರ್ತಿಸಿದ್ದವು.
ಕಾಂಗ್ರೆಸ್ನ 11 ಮಂದಿ ಶಾಸಕರನ್ನು ಮುಂಬೈಗೆ ಕರೆದುಕೊಂಡು ಬಿಜೆಪಿ ಆಪರೇಷನ್ ಕಮಲ ತೀವ್ರಗೊಳಿಸಿದ್ದರಿಂದ ತಾಳ್ಮೆ ಕಳೆದುಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಪರಮೇಶ್ವರ್ ಅವರು ನಿನ್ನೆಯಿಂದ ಆಕ್ರಮಣಕಾರಿ ರಾಜಕೀಯ ದಾಳಿ ಆರಂಭಿಸಿದ್ದಾರೆ.