ಪಕ್ಷಕ್ಕೆ ದ್ರೋಹ ಮಾಡುವ ಕೆಲಸ ಮಾಡಬೇಡಿ: ಶಾಸಕರಿಗೆ ಕಾಂಗ್ರೇಸ್ ನಾಯಕರ ಹಿತವಚನ

ಬೆಂಗಳೂರು, ಫೆ.8- ಪಕ್ಷದ ಚಿಹ್ನೆಯಡಿ ಆಯ್ಕೆಯಾಗಿರುವ ಶಾಸಕರು ಬಿಜೆಪಿ ಜತೆ ಹೋಗುವುದು ಮಾತೃ ದ್ರೋಹ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ದ್ರೋಹ ಮಾಡುವ ಕೆಲಸ ಮಾಡಬೇಡಿ ಎಂದು ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಶಾಸಕರಿಗೆ ಹಿತವಚನ ಹೇಳಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಬಿಜೆಪಿಯ ಆಪರೇಷನ್ ಕಮಲ, ಕುಮಾರಸ್ವಾಮಿಯವರ ಬಜೆಟ್ ಮಂಡನೆ, ಬರ, ಅಧಿಕಾರಿಗಳ ವರ್ಗಾವಣೆ, ಕ್ಷೇತ್ರಗಳ ಅಭಿವೃದ್ಧಿ ಸೇರಿದಂತೆ ಹಲವಾರು ವಿಷಯಗಳು ಗಂಭೀರ ಚರ್ಚೆಗೆ ಒಳಗಾದವು.

ಕಾಂಗ್ರೆಸ್ ನಾಯಕರ ಹಿತವಚನಕ್ಕೆ ತಲೆದೂಗಿರುವ ಶಾಸಕರು ಅದೇ ರೀತಿ ಸಮ್ಮಿಶ್ರ ಸರ್ಕಾರದಲ್ಲಿ ನಮ್ಮನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತಿರುವ ಧೋರಣೆಗಳಿಗೂ ಕಡಿವಾಣ ಹಾಕಿ ಎಂದು ಒತ್ತಡ ಹಾಕಿದ್ದಾರೆ.

ಆಡಳಿತಾತ್ಮಕವಾಗಿ ಇದು ನಮ್ಮ ಸರ್ಕಾರ ಎಂಬ ಭಾವನೆ ಇದ್ದಿದ್ದರೆ ಯಾವ ಶಾಸಕರೂ ಬಿಜೆಪಿಯವರ ಆಪರೇಷನ್ ಕಮಲಕ್ಕೆ ಕಿವಿಗೊಡುತ್ತಿರಲಿಲ್ಲ.ನಾವು ಹಲವಾರು ಬಾರಿ ದೂರು ಹೇಳಿದ್ದರೂ ಅದನ್ನು ಸರಿಪಡಿಸುತ್ತಿಲ್ಲ. ಹೀಗಾಗಿ ಕೆಲವು ಶಾಸಕರು ಬಿಜೆಪಿಯವರ ಜತೆ ಮಾತುಕತೆ ನಡೆಸುವ ಪರಿಸ್ಥಿತಿ ಉದ್ಬವಿಸಿದೆ.
ನಮ್ಮ ಕ್ಷೇತ್ರಗಳಿಗೆ ಒಬ್ಬ ಅಧಿಕಾರಿಯನ್ನೂ ವರ್ಗಾವಣೆ ಮಾಡಿಕೊಳ್ಳಲು ಆಗದಿದ್ದರೆ ಆಡಳಿತ ಪಕ್ಷದ ಶಾಸಕರಾಗಿ ಏನು ಪ್ರಯೋಜನ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್ ಶಾಸಕರ ಪೈಕಿ ಕೆಲವರಿಗೆ ಹೆಚ್ಚು ಆದ್ಯತೆ ಸಿಗುತ್ತಿದೆ ಇನ್ನು ಕೆಲವರಿಗೆ ಅವಕಾಶಗಳೇ ಇಲ್ಲ. ನಾಯಕರು ಮಾಡುತ್ತಿರುವ ತಾರತಮ್ಯ ಶಾಸಕರಿಗೆ ಬೇಸರ ತರುತ್ತಿದೆ ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ.

ಇದಕ್ಕೆ ಸಮಜಾಯಿಷಿ ನೀಡಿರುವ ಸಿಎಲ್‍ಪಿ ನಾಯಕರಾದ ಸಿದ್ದರಾಮಯ್ಯ, ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾದ ನಂತರ ಅನಿವಾರ್ಯವಾಗಿ ಸಮ್ಮಿಶ್ರ ಸರ್ಕಾರ ರಚಿಸಬೇಕಾಯಿತು.ಇದರಿಂದ ಕೆಲವು ರಾಜಕೀಯ ಹೊಂದಾಣಿಕೆಗಳು ಅನಿವಾರ್ಯವಾಗಿದೆ.ಇದನ್ನು ಶಾಸಕರು ಅರ್ಥ ಮಾಡಿಕೊಳ್ಳಬೇಕು.ಇದು ಶಾಶ್ವತ ವ್ಯವಸ್ಥೆ ಅಲ್ಲ. ಕಾಲ ಕಾಲಕ್ಕೆ ಸಂಪುಟ ಪುನಾರಚನೆಯಾಗುತ್ತಿರುತ್ತದೆ. ನಿಗಮ ಮಂಡಳಿಗಳ ನೇಮಕಾತಿ ಬದಲಾವಣೆಯಾಗುತ್ತಿರುತ್ತದೆ. ಹಾಗಾಗಿ ನಾವೂ ಕೂಡ ಕೆಲವು ತ್ಯಾಗಗಳನ್ನು ಮಾಡಬೇಕಿದೆ ಎಂದು ಬುದ್ಧಿವಾದ ಹೇಳಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ