ಕಾಂಪಿಟ್ ವಿತ್ ಚೀನಾ ಯೋಜನೆಗೆ 110 ಕೋಟಿ ಅನುದಾನ

ಬೆಂಗಳೂರು, ಫೆ.8- ಕಳೆದ ಸಾಲಿನ ಬಜೆಟ್‍ನಲ್ಲಿ ಪ್ರಸ್ತಾಪಿಸಿದ್ದ ಕಾಂಪಿಟ್ ವಿತ್ ಚೀನಾ ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಈ ವರ್ಷ 110 ಕೋಟಿ ಅನುದಾನ ಒದಗಿಸಿದ್ದಾರೆ.

ರಾಜ್ಯ 9 ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರದ ಉತ್ಪಾದನ ವಲಯಗಳನ್ನು ಸ್ಥಾಪಿಸಲು ಕಳೆದ ಸಾಲಿನ ಬಜೆಟ್‍ನಲ್ಲಿ ಕುಮಾರಸ್ವಾಮಿ ವಿಷಯ ಪ್ರಸ್ತಾಪಿಸಿದ್ದರು. ಈ ವರ್ಷ ಅನುದಾನ ನಿಗದಿ ಮಾಡುವ ಮೂಲಕ ಅದಕ್ಕೆ ಚಾಲನೆ ನೀಡಿದ್ದಾರೆ.

ತುಮಕೂರು ಜಿಲ್ಲೆ ವಸಂತನರಸಾಪುರದ 9629 ಎಕರೆ ಪ್ರದೇಶದಲ್ಲಿ ಚನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಯಡಿ ತುಮಕೂರು ಕೈಗಾರಿಕಾ ನೋಡ್‍ಅನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದರಿಂದ 50ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು, 2ಲಕ್ಷ ಜನರಿಗೆ ಉದ್ಯೋಗ ಸಿಗುವ ನಿರೀಕ್ಷೆ ಇದೆ.

ವಸಂತನರಸಾಪುರ, ತುಮಕೂರು, ರಾಮನಗರ, ಬೆಂಗಳೂರು ನಡುವೆ ಪ್ರತ್ಯೇಕ ಟ್ರ್ಯಾಕ್‍ಗಳ ಮೇಲೆ ರೇಲ್ ಆಧಾರಿತ ಸಮರ್ಥ ಹಾಗೂ ಅನುಕೂಲಕರ ಸಾಮೂಹಿಕ ಸಾಗಾಣಿಕೆ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.

ನೂತನ ಕೈಗಾರಿಕಾ ನೀತಿಯಲ್ಲಿ ಹಿಂದುಳಿದ ಪ್ರದೇಶಗಳು ಮತ್ತು ಎರಡನೇ ಹಾಗೂ ಮೂರನೇ ಶ್ರೇಣಿಯ ನಗರಗಳಿಗೆ ಬಂಡವಾಳ ಆಕರ್ಷಿಸಲು ಒತ್ತು ನೀಡಲಾಗುತ್ತಿದೆ. 2020ರಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು ಎಂದು ಹೇಳಿದ್ದಾರೆ.
ಕೆಐಎಡಿಬಿ ವತಿಯಿಂದ ಹಾಸನದ ಅರಸೀಕೆರೆ, ಮಂಡ್ಯದ ನಾಗಮಂಗಲ, ಕಲಬುರ್ಗಿಯ ಚಿತ್ತಾಪುರ, ವಿಜಯಪುರದ ಮುಳವಾಡ, ಬೆಳಗಾವಿಯ ಕಣಗಲ, ತುಮಕೂರಿನ ಮಧುಗಿರಿಯಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದಾರೆ.

ಸೂಕ್ಷ್ಮ ಮತ್ತು ಮಧ್ಯ ಕೈಗಾರಿಕೆಗಳ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಎದುರಾಗುವ ತೊಂದರೆಗಳಿಗೆ ಸಾರ್ಥಕ್ ಯೋಜನೆ ರೂಪಿಲಾಗಿದ್ದು, 5 ಕೋಟಿ ಅನುದಾನ ಒದಗಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ