ಬೆಂಗಳೂರು, ಫೆ.7- ಬಿಬಿಎಂಪಿಗೂ, ಭ್ರಷ್ಟಾಚಾರಕ್ಕೂ ಅವಿನಾಭಾವ ಸಂಬಂಧ.ಪ್ರತಿ ನಿತ್ಯ ಒಂದಲ್ಲ ಒಂದು ಆರೋಪಗಳು ಕೇಳಿ ಬರುತ್ತಿರುವುದು ಸಾಮಾನ್ಯವಾಗಿದೆ.ಇದೀಗ ಕಂದಾಯ ಪರಿವೀಕ್ಷಕರೊಬ್ಬರು ಲಂಚ ಸ್ವೀಕರಿಸಿದ ಆರೋಪಕ್ಕೆ ಗುರಿಯಾಗಿದ್ದಾರೆ.
ಚಂದ್ರಾ ಲೇ ಔಟ್ನಲ್ಲಿ ಕಂದಾಯ ಪರಿವೀಕ್ಷಕರಾಗಿರುವ ಶಾರದಮ್ಮ ಅವರು ಲಂಚ ಅಪೇಕ್ಷಿಸಿರುವ ವೀಡಿಯೋ ತುಣುಕು ವೈರಲ್ ಆಗಿದ್ದು ಭಾರೀ ಸದ್ದು ಮಾಡುತ್ತಿದೆ.
ಮಹಿಳೆಯೊಬ್ಬರ ನಿವೇಶನಕ್ಕೆ ಖಾತೆ ಮಾಡಿಕೊಡಲು ಶಾರದಮ್ಮ ಅವರು 10 ಸಾವಿರ ರೂ.ಲಂಚ ನೀಡುವಂತೆ ಒತ್ತಾಯ ಮಾಡಿರುವ ಆರೋಪಕ್ಕೆ ಗುರಿಯಾಗಿದ್ದಾರೆ.
ಪಾಲಿಕೆಯಲ್ಲಿ ಕೇವಲ 500 ರೂ.ಖರ್ಚಾಗುವ ಕೆಲಸಕ್ಕೆ ಸಾವಿರಗಟ್ಟಲೆ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಶಾರದಮ್ಮ ಅವರು ಮಹಿಳೆಯೊಬ್ಬರಿಂದ 10 ಸಾವಿರ ಲಂಚ ಅಪೇಕ್ಷಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈಯಮ್ಮ ಫೈಲಿಗೆ ಒಂದು ಸಹಿ ಹಾಕಬೇಕಾದರೆ ಸಾವಿರ , ಸಾವಿರ ಲಂಚ ಕೇಳುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಇದೇ ರೀತಿ 198 ವಾರ್ಡ್ಗಳಲ್ಲೂ ಹಲವಾರು ಭ್ರಷ್ಟ ಅಧಿಕಾರಿಗಳು ಸಾರ್ವಜನಿಕರ ಕೆಲಸಕ್ಕೆ ಸಾವಿರಗಟ್ಟಲೆ ಲಂಚ ಕೇಳುತ್ತಿದ್ದಾರೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಪಾಲಿಕೆಯಲ್ಲಿ ನಡೆಯುತ್ತಿರುವ ಲಂಚಾವತಾರಕ್ಕೆ ಕಡಿವಾಣ ಹಾಕಿ ಸಾರ್ವಜನಿಕರ ರಕ್ಷಣೆಗೆ ಮುಂದಾಗಬೇಕು ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.