ಬೆಂಗಳೂರು, ಫೆ.6- ಮೇಕೆದಾಟು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಕೇಂದ್ರ ಜಲಾಯೋಗ ಒಪ್ಪಿಗೆ ನೀಡಿದೆ ಎಂದು ತಿಳಿಸಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು, ಭದ್ರಾಮೇಲ್ದಂಡೆ ಹಾಗೂ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗಳ ಪ್ರಗತಿಯನ್ನು ತ್ವರಿತಗೊಳಿಸಿರುವುದಾಗಿ ಹೇಳಿದ್ದಾರೆ.
ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿರುವ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಯ ನಾರಾಯಣಪುರ ಎಡದಂಡೆ ಕಾಲುವೆಯ ಮೇಲುಸ್ತುವಾರಿಗಾಗಿ 1050 ಕೋಟಿ ಮೊತ್ತದ ಯೋಜನೆಗೆ ಟೆಂಡರ್ ಕರೆಯಲಾಗಿದೆ ಎಂದು ನೀರಾವರಿಗೆ ಸಂಬಂಧಪಟ್ಟಂತೆ ವಿವರಣೆ ನೀಡಿದ್ದಾರೆ.
ಕಂದಾಯ ಇಲಾಖೆಯಲ್ಲಿ ಪೆÇೀಡಿಮುಕ್ತ ಅಭಿಯಾನ ಆರಂಭಿಸಲಾಗಿದ್ದು, ಈವರೆಗೂ 11,577 ಗ್ರಾಮಗಳ ಸರ್ವೆ ಕಾರ್ಯ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಭೂ ಪರಿವರ್ತನೆಗಾಗಿ ನಿಯಮಗಳನ್ನು ಸಡಿಲಗೊಳಿಸಲಾಗಿದೆ.ಪ್ರಮಾಣ ಪತ್ರ ಮತ್ತು ದಾಖಲಾತಿಗಳನ್ನು ಸಂರಕ್ಷಿಸಿಡಲು ನಾಗರಿಕರಿಗೆ ಡಿಜಿಟಲ್ ಲಾಕರ್ ಸೌಲಭ್ಯ ಒದಗಿಸಲಾಗಿದೆ ಎಂದರು.
ಆರೋಗ್ಯ ಕರ್ನಾಟಕ ಯೋಜನೆಯಡಿ 2019 ಜನವರಿ ಅಂತ್ಯಕ್ಕೆ ರಾಜ್ಯದ 1.22 ಲಕ್ಷ ಜನರು ಚಿಕಿತ್ಸೆ ಪಡೆದಿದ್ದಾರೆ. ಆರೋಗ್ಯ ಕರ್ನಾಟಕ ಯೋಜನೆ ಮತ್ತು ಆಯುಷ್ಮಾನ್ ಭಾರತ್ ಎಂಬ ಕೋಬ್ರ್ಯಾಂಡ್ ಹೆಸರಿನ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದ್ದು, ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ, ಎಪಿಎಲ್ ಕುಟುಂಬಕ್ಕೆ ಶೇ.30ರಷ್ಟು ವೆಚ್ಚ ಭರಿಸುವ ಈ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಉತ್ತಮ ಆರೋಗ್ಯ ಸೇವೆ ಒದಗಿಸಲು ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೊಪ್ಪಳ, ಗದಗ, ಚಾಮರಾಜನಗರ ಹಾಗೂ ಹಾಸನದಲ್ಲಿ 450 ಹಾಸಿಗೆಗಳ ಹೊಸ ಆಸ್ಪತ್ರೆಗಳ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಹುಬ್ಬಳ್ಳಿಯ ಕಿಮ್ಸ್, ವಿಜಯನಗರ ವಿಮ್ಸ್, ಬಳ್ಳಾರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಮೈಸೂರು ಮತ್ತು ಕಲಬುರ್ಗಿ ಟ್ರೌಮಾಸೆಂಟರ್ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ ಎಂದರು.