ಬೆಂಗಳೂರು, ಫೆ. 6- ಆಪರೇಷನ್ ಕಮಲಕ್ಕೆ ತುತ್ತಾಗಿರುವ ಶಾಸಕರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದಾರೆ ಎಂಬ ಸುಳಿವು ದೊರೆಯುತ್ತಿದ್ದಂತೆ ಕಾಂಗ್ರೆಸ್ ತನ್ನ ಅತೃಪ್ತ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಪ್ರಯೋಗ ಮಾಡಲು ಮುಂದಾಗಿದೆ.
ಈ ಮೊದಲು ಕರೆದಿದ್ದ ಶಾಸಕಾಂಗ ಸಭೆಗೆ ರಮೇಶ್ ಜಾರಕಿಹೊಳಿ (ಗೋಕಾಕ್ ಕ್ಷೇತ್ರ), ಮಹೇಶ್ ಕುಮಟಳ್ಳಿ(ಅಥಣಿ), ಬಿ.ನಾಗೇಂದ್ರ (ಬಳ್ಳಾರಿ ಗ್ರಾಮೀಣ) ಮತ್ತು ಡಾ.ಉಮೇಶ್ ಜಾಧವ್(ಚಿಂಚೋಳಿ) ಸೇರಿ ನಾಲ್ವರು ಶಾಸಕರು ಗೈರು ಹಾಜರಾಗಿದ್ದರು. ಅವರಿಗೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೋಟಿಸ್ ನೀಡಿದ್ದರು.ಅದಕ್ಕೆ ಉತ್ತರ ನೀಡಿದ ನಾಲ್ವರು ಶಾಸಕರು ಉತ್ತರ ನೀಡಿ ತಾವು ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದರು.ಆದರೆ ಅದನ್ನು ನಂಬದ ಸಿದ್ದರಾಮಯ್ಯ ಅವರು ಖುದ್ಧಾಗಿ ಹಾಜರಾಗಿ ವಿವರಣೆ ನೀಡುವಂತೆ ಮತ್ತೊಂದು ನೋಟಿಸ್ ನೀಡಿದ್ದರು.ಆದರೆ ಅದಕ್ಕೆ ಅತೃಪ್ತ ಶಾಸಕರು ಕಿಮ್ಮತ್ತು ನೀಡಿಲ್ಲ. ಈಗ ಮತ್ತೊಂದು ಶಾಸಕಾಂಗ ಸಭೆಯನ್ನು ಫೆ.8ರಂದು ಕರೆಯಲಾಗಿದೆ. ಅದರಲ್ಲಿ ಖುದ್ದು ಹಾಜರಾಗದಿದ್ದರೆ ಗೈರು ಹಾಜರಾವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ತಿಳಿಸಿದೆ.
ಎಲ್ಲಾ ಶಾಸಕರು ಅಧಿವೇಶನದಲ್ಲಿ ಭಾಗವಹಿಸುವಂತೆ ವಿಪ್ ನೀಡಿದ್ದರು ಕೆಲ ಶಾಸಕರು ಕುಂಟು ನೆಪ ಹೇಳಿ ಸದನಕ್ಕೆ ಗೈರು ಹಾಜರಾಗಿದ್ದಾರೆ.ಇಂದು ಸಂಜೆ ಉಪಮುಖ್ಯಮಂತ್ರಿ ಕರೆದಿದ್ದ ಜೆಡಿಎಸ್ ಕಾಂಗ್ರೆಸ್ ಶಾಸಕರ ಜಂಟಿ ಔತಣಕೂಟಕ್ಕೂ ಕೆಲ ಶಾಸಕರು ಗೈರು ಹಾಜರಾಗಿದ್ದಾರೆ.ಪಕ್ಷದ ವರಿಷ್ಠರಿಗೆ ಸಡ್ಡು ಹೊಡೆಯುತ್ತಿರುವ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಅವರಿಗೆ ಕಾಂಗ್ರೆಸ್ ದೂರು ನೀಡಲಿದೆ.