ಹುಬ್ಬಳ್ಳಿ, ಫೆ.5- ನಾಲ್ಕನೆ ಬಾರಿ ಆಪರೇಷನ್ ಕಮಲ ಮಾಡುತ್ತಿರುವ ಬಿಜೆಪಿ ನಾಯಕರಿಗೆ ಮತ್ತೊಮ್ಮೆ ಮುಖಭಂಗವಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂದಿಲ್ಲಿ ಹೇಳಿದರು.
ಹುಬ್ಬಳ್ಳಿಯ ಏರ್ಪೋರ್ಟ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಹಲವಾರು ನಾಯಕರು ಬಜೆಟ್ ಮಂಡನೆ ಆಗುವುದಿಲ್ಲ ಎನ್ನುತ್ತಿದ್ದಾರೆ. ನಮ್ಮ ಶಾಸಕರ ಮೇಲೆ ಒತ್ತಡ ತರುತ್ತಿದ್ದಾರೆ.ಅವರಿಗೆ ಮತ್ತೊಮ್ಮೆ ಮುಖಭಂಗವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅವರ ಎಲ್ಲ ಆಪರೇಷನ್ ಕಮಲಗಳು ಠುಸ್ ಆಗಿವೆ ಎಂದು ಹೇಳಿದರು.
ನಮ್ಮ ಶಾಸಕರು ಎಲ್ಲಿಯಾದರೂ ಹೋಗಲಿ, ಬಿಜೆಪಿಯವರಿಗೇನು ಸಂಬಂಧ.ನಮ್ಮ ಪಕ್ಷದ ಆಂತರಿಕ ಸಮಸ್ಯೆ ಕಟ್ಟಿಕೊಂಡು ಅವರಿಗೇನಾಗಬೇಕು ಎಂದು ಪ್ರಶ್ನಿಸಿದರು.
ಅವರು ಏಕೆ ಹರಿಯಾಣದ ಗುರುಗ್ರಾಮ ರೆಸಾರ್ಟ್ನಲ್ಲಿದ್ದರು ಎಂದು ಪ್ರಶ್ನಿಸಿದರು.45 ವರ್ಷಗಳ ನಂತರ ದೇಶದಲ್ಲಿ ದೊಡ್ಡ ನಿರುದ್ಯೋಗದ ಭೀತಿ ಸೃಷ್ಟಿಯಾಗಿದೆ. ಬಿಜೆಪಿಯವರು ದೇಶಕ್ಕೆ ಏನು ಮಾಡಿದ್ದಾರೆ, ವಿರೋಧ ಪಕ್ಷಗಳನ್ನು ಮುಗಿಸುವ ಕೆಲಸ ಮಾಡುತ್ತಿದ್ದಾರೆ.ಅಚ್ಛೇದಿನ್ ಎಲ್ಲಿ ಹೋಯ್ತು, ಐದು ವರ್ಷ ಆಯ್ತು ಅಚ್ಛೇದಿನ್ ಏಕೆ ಬರಲಿಲ್ಲ ಎಂದು ಹೇಳಿದರು.
ಬರ ಪರಿಹಾರಕ್ಕೆ ಮಹಾರಾಷ್ಟ್ರ ರಾಜ್ಯಕ್ಕೆ 4 ಸಾವಿರ ಕೋಟಿ ರೂ.ಗಳನ್ನು ನೀಡಿರುವ ಸರ್ಕಾರ ನಮ್ಮ ರಾಜ್ಯಕ್ಕೆ 900 ಕೋಟಿ ರೂ.ನೀಡಿ ತಾರತಮ್ಯ ಮಾಡಿದೆ. ನಮ್ಮ ರಾಜ್ಯದ ಎಂಪಿಗಳು ಏಕೆ ಮೌನವಾಗಿದ್ದಾರೆ ಎಂದು ದಿನೇಶ್ ಹೇಳಿದರು.