
ತಿ.ನರಸೀಪುರ, ಫೆ.5- ತಿರುಮಕೂಡಲು ನರಸೀಪುರದಲ್ಲಿ ಜರುಗಲಿರುವ ಕುಂಭಮೇಳ ಮುಡುಕುತೊರೆಯಲ್ಲಿನ ಜಾತ್ರೆ ಎರಡೂ ಏಕಕಾಲದಲ್ಲಿ ಪ್ರಾರಂಭವಾಗುವುದರಿಂದ ಈವೆರಡನ್ನೂ ಅಭೂತಪೂರ್ವ ಯಶಸ್ವಿಗೊಳಿಸಬೇಕು. ಭಕ್ತರಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅಧಿಕಾರಿಗಳಿಗೆ ಸೂಚಿಸಿದರು.
ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಇದೇ 17ರಂದು ಆರಂಭಗೊಳ್ಳಲಿರುವ 11ನೇ ಕುಂಭಮೇಳಕ್ಕೆ ನಡೆದಿರುವ ಸಿದ್ಧತಾ ಕಾರ್ಯಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಕುಂಭ ಮೇಳಕ್ಕೆ ಹಣಕಾಸಿನ ಕೊರತೆ ಇಲ್ಲ. ಅಧಿಕಾರಿಗಳು ತೇಪೆ ಕೆಲಸ ಮಾಡದೆ ಶಾಶ್ವತ ಕಾಮಗಾರಿ ಮಾಡಬೇಕೆಂದು ತಾಕೀತು ಮಾಡಿದರು.
ಎಲ್ಲಾ ರಸ್ತೆಗಳನ್ನು ಡಾಂಬರೀಕರಣ ಮಾಡಬೇಕು.ರಾಜ್ಯಮಟ್ಟದ ಅಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ಕೆಲಸ ವಹಿಸದೆ ತಾವೇ ಖುದ್ದಾಗಿ ನಿಂತು ಕಾಮಗಾರಿಗಳನ್ನು ನೋಡಿಕೊಳ್ಳಬೇಕು. ಯಾವುದೇ ಸಬೂಬು ಹೇಳಬಾರದು. ಎಲ್ಲೂ ಏನೂ ಕೊರತೆ ಆಗಬಾರದು ಎಂದು ಆದೇಶಿಸಿದರು.
ಶ್ರೀ ಗುಂಜಾನರಸಿಂಹಸ್ವಾಮಿ ದೇವಸ್ಥಾನದಿಂದ ಕುಂಭಮೇಳದ ಯಾಗಮಂಟಪದ ಸ್ಥಳದವರೆಗೆ ಭಕ್ತರ ಅನುಕೂಲಕ್ಕಾಗಿ ತಾತ್ಕಾಲಿಕ ಸೇತುವೆಯನ್ನು ಆರ್ಮಿ ಜತೆ ಸೇರಿ ನಿರ್ಮಿಸಬೇಕು.ಈ ಬಗ್ಗೆ ಕೂಡಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ ಎಂದು ಹೇಳಿದರು.
ಮೈಸೂರು ದಸರಾ ಮಾದರಿಯಲ್ಲಿ ಕುಂಭಮೇಳದಲ್ಲೂ ದ್ವೀಪಾಲಂಕಾರ ಮಾಡಿ ಜನರು ಸಂಭ್ರಮಿಸುವ ಹಾಗೆ ಮಾಡಬೇಕು ಎಂದರು.
ಬೇರೆ ಬೇರೆ ರಾಜ್ಯಗಳಿಂದಲೂ ಭಕ್ತರು ಆಗಮಿಸುವುದರಿಂದ ತಾತ್ಕಾಲಿಕವಾಗಿ 200 ಸ್ನಾನ ಗೃಹಗಳು, ಶೌಚಾಲಯ, ಕುಡಿಯುವ ನೀರಿನ ಘಟಕಗಳು ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ವಿವಿಧ ಭಾಗಗಳಿಂದ ಬರುವ ಭಕ್ತರ ಅನುಕೂಲಕ್ಕಾಗಿ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಹಾಗೂ ಸ್ಥಳೀಯವಾಗಿ ಮಿನಿಬಸ್ ಸೌಕರ್ಯ ನೀಡಬೇಕೆಂದು ಸಾರಿಗೆ ಅಧಿಕಾರಿಗಳಿಗೆ ಜಿಟಿಡಿ ಸೂಚಿಸಿದರು.
ಭದ್ರತೆ:
ಇದೇ ವೇಳೆ ಎಎಸ್‍ಪಿ ಸ್ನೇಹ ಮಾತನಾಡಿ, 1100 ಕಾನ್‍ಸ್ಟೆಬಲ್‍ಗಳು, 300 ಮಹಿಳಾ ಕಾನ್‍ಸ್ಟೆಬಲ್‍ಗಳನ್ನು ಭದ್ರತೆಗೆ ನಿಯೋಜಿಸಲಾಗುವುದು ಎಂದು ಹೇಳಿದರು.
ಶಾಸಕರಾದ ಯತೀಂದ್ರ ಸಿದ್ದರಾಮಯ್ಯ, ಅಶ್ವಿನ್‍ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ವೇಳೆ ಹಾಜರಿದ್ದರು.