ತಪಾಸಣೆಗೆ ಬಂದ ಪಿಎಸ್‍ಐ ಮೇಲೆ ಕಾರು ಹರಿಸಿ ಕೊಲೆಗೆ ಯತ್ನ

ತುಮಕೂರು,ಫೆ.5- ಮೈಸೂರಿನಲ್ಲಿ ಇನ್ಸ್‍ಪೆಕ್ಟರ್ ಮೇಲೆ ಕಾರು ಹರಿಸಿ ಕೊಲೆಗೆ ಯತ್ನಿಸಿದ ಘಟನೆಯ ಬೆನ್ನಲ್ಲೇ ತುಮಕೂರಿನಲ್ಲಿ ತಪಾಸಣೆಗೆ ಬಂದ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಮೇಲೆಯೇ ಕಾರು ಹರಿಸಿ ಕೊಲೆ ಯತ್ನಿಸಿದ ಆಘಾತಕಾರಿ ಘಟನೆ ತುಮಕೂರಿನ ಜಯನಗರ ಮತ್ತು ಹೊಸಬಡಾವಣೆ ಪೊಲೀಸ್ ಠಾಣೆಗಳ ಗಡಿ ಭಾಗದಲ್ಲಿ ತಡ ರಾತ್ರಿ ಜರುಗಿದೆ.

ಘಟನೆಯಲ್ಲಿ ಜಯನಗರ ಠಾಣಾ ಸಬ್ ಇನ್ಸ್‍ಪೆಕ್ಟರ್ ನವೀನ್ ಕುಮಾರ್ ಗಾಯಗೊಂಡಿದ್ದು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ: ನಿನ್ನೆ ರಾತ್ರಿ ಸುಮಾರು 12.30ರ ಸಮಯದಲ್ಲಿ ಜಯನಗರ ಠಾಣಾ ಸಬ್ ಇನ್ಸ್‍ಪೆಕ್ಟರ್ ನವೀನ್ ಕುಮಾರ್ ಗಸ್ತು ತಿರುಗುತ್ತಿದ್ದರು. ಈ ವೇಳೆ ಉಪ್ಪರಳ್ಳಿ ಮೇಲ್ಸೇತುವೆ ಬಳಿ ಕೆಲವರು ಕಾರು ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದರು.ಇದನ್ನು ಕಂಡ ನವೀನ್ ಕುಮಾರ್ ಅವರು, ಕಾರಿನ ಬಳಿ ತೆರಳಿ ಪರಿಶೀಲಿಸಿದಾಗ ಕಾರಿನಲ್ಲಿ ಮಚ್ಚು, ಲಾಂಗು, ದೊಣ್ಣೆಗಳು ಇರುವುದನ್ನು ಕಂಡಿದ್ದಾರೆ.ಜೊತೆಗೆ ಕಾರಿನ ಹಿಂಭಾಗ ಆರು ಮಂದಿ ಕುಳಿತಿರುವುದನ್ನು ನೋಡಿ ಕಾರಿನ ಚಾಲಕನಿಗೆ ಕೆಳಗೆ ಇಳಿಯುವಂತೆ ತಿಳಿಸಿದ್ದಾರೆ.

ಈ ವೇಳೆ ಇಬ್ಬರು ಕಾರಿನಿಂದ ಕೆಳಗಿಳಿಯುತ್ತಲೇ ನವೀನ್ ಕುಮಾರ್ ಅವರನ್ನು ತಳ್ಳಿ ಅವರ ಮೇಲೆ ಕಾರು ಹರಿಸಲು ಮುಂದಾಗಿದ್ದಾರೆ. ಕೂಡಲೇ ಗಸ್ತು ವಾಹನದಲ್ಲಿದ್ದ ಚಾಲಕ ವಾಹನದ ಬಾಗಿಲು ತೆರೆದು ಸಬ್ ಇನ್ಸ್‍ಪೆಕ್ಟರ್ ನವೀನ್ ಕುಮಾರ್ ಅವರನ್ನು ಪಾರು ಮಾಡಲು ಯತ್ನಿಸಿದಾಗ ಗಸ್ತು ವಾಹನದ ಬಾಗಿಲು ಬಡಿದು ಗಾಯಗೊಂಡಿದ್ದಾರೆ.

ಘಟನೆ ಕುರಿತು ಕೂಡಲೇ ತಿಲಕ್‍ಪಾರ್ಕ್ ವೃತ್ತದ ವೃತ್ತ ನಿರೀಕ್ಷಕ ರಾಧಾಕೃಷ್ಣ, ಡಿವೈಎಸ್‍ಪಿ ತಿಪ್ಪೇಸ್ವಾಮಿ, ಅಡಿಷನಲ್ ಎಸ್‍ಪಿ ಶೋಭಾರಾಣಿ, ಎಸ್‍ಪಿ ಕೋನ ವಂಶಿ ಕೃಷ್ಣ ಸ್ಥಳಕ್ಕೆ ದೌಡಾಯಿಸಿ, ಗಾಯಗೊಂಡ ನವೀನ್ ಕುಮಾರ್ ಅವರನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ, ಆರೋಪಿಗಳ ಪತ್ತೆಗೆ ತಿಲಕ್ ಪಾರ್ಕ್ ವೃತ್ತ ನಿರೀಕ್ಷಕ ರಾಧಾಕೃಷ್ಣ,, ಎಸ್‍ಐ ಲಕ್ಷ್ಮಯ್ಯ, ಸೈಮನ್ ವಿಕ್ಟರ್, ಮುನ್ನಾ ಪಾಷಾ, ರಾಘವೇಂದ್ರ ಅವರನ್ನೊಳಗೊಂಡ ವಿಶೇ ತಂಡ ರಚಿಸಿದರು.

ತಕ್ಷಣ ಕಾರ್ಯಪ್ರವೃತ್ತರಾದ ತಂಡ ಬೆಂಗಳೂರು ಮೂಲದ ಮುರುಗನ್, ಸಂತೋಷ್, ವೆಂಕಟೇಶ್ ಎಂಬುವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಬ್ ಇನ್ಸ್‍ಪೆಕ್ಟರ್ ನವೀನ್ ಕುಮಾರ್ ಅವರು ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆಸ್ಪತ್ರೆಗೆ ಜಿಲ್ಲಾ ಎಸ್‍ಪಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ