ಬೆಂಗಳೂರು, ಫೆ.4-ನಮಗೆ ಉಪಯೋಗ ಆಗುವ ಕೆಲಸವೆಂದರೆ ಎಷ್ಟೇ ಕಷ್ಟ ಅದರೂ ಮಾಡಿಕೊಳ್ಳುತ್ತೇವೆ. ಆದರೆ ಹತ್ತು ಜನರಿಗೆ ಅನುಕೂಲ ಕಲ್ಪಿಸುವ ಕೆಲಸವೆಂದರೆ ನಿರ್ಲಕ್ಷ್ಯ ಮಾಡುತ್ತೇವೆ. ಹೀಗಿರುವಾಗ ಸಮಾಜಕ್ಕೆ ಏನಾದರೂ ಸೇವೆ ಮಾಡಬೇಕು ಅಂದುಕೊಂಡ ಇಂದಿರಾ ನಗರವಾಸಿ ಸಂತೋಷ್ ಕುಮಾರ್ ಗೋಯೆಂಕಾ ಆಯ್ದುಕೊಂಡದ್ದು ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಬೆಂಗಳೂರಿನ ಸರ್ವಜ್ಞನಗರದ ಕಲ್ಪಹಳ್ಳಿ ರುದ್ರಭೂಮಿಯ ಚಿತಾಗಾರದ ಪುನಃಶ್ಚೇತನ ಕೆಲಸ.
ಅಚ್ಚರಿಯಾದರೂ ಇದು ಸತ್ಯ.ಜವಳಿ ಉದ್ಯಮಿಯಾದ ಇವರು ಕೂಡು ಕುಟುಂಬದಿಂದ ಬಂದವರು. ಅವರೇ ಹೇಳುವಂತೆ, ನಮ್ಮದು ದೊಡ್ಡ ಕುಟುಂಬ. ನಮ್ಮ ಸಹೋದರರು ಬೇರೆ ಬೇರೆ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ನಾನು 1974ರಲ್ಲಿ ಬೆಂಗಳೂರಿಗೆ ಬಂದೆ,ಇಲ್ಲಿ ಸಿದ್ಧ ಉಡುಪು ತಯಾರಿಸುವ ಉದ್ಯಮ ನಡೆಸುತ್ತಿದ್ದೇನೆ,ಇಲ್ಲಿಯ ಸಹೃದಯರನ್ನು ಕಂಡು ದಿನೇ ದಿನೇ ನಗರದ ಮೇಲೆ ಪ್ರೀತಿ ಹೆಚ್ಚಾಯಿತು.
ನನಗೆ ಬೆಂಗಳೂರು ಎಲ್ಲಾ ಕೊಟ್ಟಿದೆ. ಸಮಾಜಕ್ಕೆ ನಾನೇನಾದರೂ ಮಾಡಬೇಕು ಎಂದು ಅನಾಥ ಮಕ್ಕಳಿಗೆ ಹಾಸಿಗೆ ,ಹೊದಿಕೆ ,ಊಟ,ತಟ್ಟೆ ಉಡುಪು ,ಬಟ್ಟೆ ಒಗೆಯುವ ಬ್ಯಾಂಡ್ ಬಾಕ್ಸ್ನೊಂದಿಗೆ ಒಪ್ಪಂದ ಮಾಡಿಕೊಂಡು ನೆರವು ಕಲ್ಪಿಸಿದ್ದೇನೆ.
ಅಂತೆಯೇ ಶಿಥಿಲಾವಸ್ಥೆಯಲ್ಲಿದ್ದ ಕಲ್ಪಹಳ್ಳಿಯ ಚಿತಾಗಾರದ ಹಾಳಾದ ಗೋಡೆಗಳಿಗೆ ಬಣ್ಣ ಬಳಿಸಬೇಕೆಂದು ಅಂದುಕೊಂಡೆ.ಆದರೆ ಅಲ್ಲಿನ ವಾಸ್ತವ ಸ್ಥಿತಿಯೇ ಬೇರೆಯಾಗಿತ್ತು. ಅದನ್ನು ಕಂಡು ಪುನಶ್ಚೇತನಕ್ಕೆ ಮುಂದಾದೆ ಎಂದು ಹೇಳಿದ್ದಾರೆ.
ಬಿರುಕು ಬಿಟ್ಟ ಗೋಡೆಗಳು, ಕಿಟಕಿಯ ಒಡೆದ ಗಾಜುಗಳು, ಬಿದ್ದು ಹೋಗಿದ್ದ ಬಾಗಿಲುಗಳು, ಸಿಮೆಂಟ್ ಕಿತ್ತು ಹೋಗಿದ್ದ ನೆಲ, ಮಳೆಗೆ ಸೋರುತ್ತಿದ್ದ ಮೇಲ್ಛಾವಣಿ, ಕೆಟ್ಟು ಹೋದ ವಿದ್ಯುತ್ ದ್ವೀಪಗಳನ್ನು ಕಂಡು ಅವುಗಳ ದುರಸ್ತಿಗಾಗಿ ಗಾರೆ ಕೆಲಸದವರನ್ನು ವಿಚಾರಿಸಿದಾಗ, ಸ್ಮಶಾನದ ಕೆಲಸವೆಂದು ಕೆಲವರು ಹಿಂದೆ ಸರಿದರು. ಹೇಗೋ ಕೆಲಸದವರನ್ನು ಒಪ್ಪಿಸಿದರೂ ಬಿಬಿಎಂಪಿಯಿಂದ ಅನುಮತಿ ಪಡೆಯಲು ಹರಸಾಹಸ ಮಾಡಬೇಕಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.
ಕೊನೆಗೆ ಮುಂಬೈನ ಅಜಂತಾ ಪಾರ್ಮ ಸಂಸ್ಥೆಯ ಸಹಕಾರದಿಂದ ದುರಸ್ತಿಗೆ ಅಂದಾಜು ಮೊತ್ತ 3ಲಕ್ಷ ಹೊಂದಿಸಲಾಯಿತಾದರೂ ಕೆಲಸ ಮುಗಿಯುವ ವೇಳೆಗೆ ಒಟ್ಟು ವೆಚ್ಚ 5ಲಕ್ಷ ಗಡಿ ದಾಟಿತ್ತು. ಹೇಗೋ ಕಷ್ಟಪಟ್ಟು ಒಂದೊಂದೇ ಕೆಲಸವನ್ನು ಮಾಡಿ ಮುಗಿಸಿದ್ದು, ಇದೀಗ ನವೀಕೃತಗೊಂಡಿರುವ ಚಿತಾಗಾರ ನೋಡಿ ಬದುಕು ಸಾರ್ಥಕವಾಯಿತು ಎಂಬ ಭಾವನೆ ಮೂಡಿದೆ ಎಂದರು.
ಸುಮಾರು 64 ವರ್ಷ ವಯಸ್ಸಿನ ಗೋಯಂಕಾ ತಮ್ಮ ಇಳಿ ವಯಸ್ಸಿನಲ್ಲೂ ಇಚ್ಛಾಶಕ್ತಿ ಕಾಳಜಿ, ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದು ಎಲ್ಲರಿಂದ ಮೆಚ್ಚುಗೆಗೆ ಪಾತ್ರವಾಗಿದೆ ಅಲ್ಲದೆ. ಅವರು ಇತರರಿಗೂ ಅದರ್ಶರಾಗಿದ್ದಾರೆ.