ಮೌರ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಿದ ಜಿಲ್ಲಾ ಕಾಂಗ್ರೇಸ್ ಸಮಿತಿ

ಬೆಂಗಳೂರು, ಫೆ.4-ಹುತಾತ್ಮರ ದಿನಾಚರಣೆಯಂದು ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಹತ್ಯೆಯನ್ನು ಮರು ಸೃಷ್ಟಿಸಿ ಹಿಂದೂ ಮಹಾಸಭಾ ಕಾರ್ಯಕರ್ತರು ವಿಕೃತಿ ಮೆರೆದಿದ್ದಾರೆ ಎಂದು ಆರೋಪಿಸಿ ಬೆಂಗಳೂರು ನಗರ ಕೇಂದ್ರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವತಿಯಿಂದ ನಗರದ ಮೌರ್ಯ ವೃತ್ತದ ಬಳಿ ಪ್ರತಿಭಟನೆ ನಡೆಸಲಾಯಿತು.

ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದ ಪೂಜಾ ಶಾಕೂನ್ ಪಾಂಡೆ ಅವರು ಹುತಾತ್ಮ ದಿನಾಚರಣೆಯಂದು ಮಹಾತ್ಮಗಾಂಧೀಜಿಯವರ ಹತ್ಯೆಯನ್ನು ಮರು ಸೃಷ್ಟಿಸಿ ಗಾಂಧೀಜಿ ಭಾವಚಿತ್ರಕ್ಕೆ ನಕಲಿ ಪಿಸ್ತೂಲಿನಿಂದ ಗುಂಡು ಹಾರಿಸುವ ಮೂಲಕ ವಿಕೃತಿ ಮೆರೆದಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರಾದ ನಂಜಯ್ಯ ಹಿರೇಮಠ್, ಸಮಿತಿ ಅಧ್ಯಕ್ಷ ಜಿ.ಜನಾರ್ಧನ್, ಮುಖಂಡರಾದ ಎಸ್.ಮನೋಹರ್ ಆರೋಪಿಸಿದರು.

ಹಿಂದೂ ಮಹಾಸಭಾ, ಆರ್‍ಎಸ್‍ಎಸ್, ಬಿಜೆಪಿ ಬೆಂಬಲಿತ ಸಂಘಟನೆಗಳು ದೇಶದಲ್ಲಿ ಅಶಾಂತಿ ಉಂಟು ಮಾಡಲು ಜಾತಿ-ಜಾತಿಗಳ ನಡುವೆ ಸಂಘರ್ಷ ತಂದು ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸುತ್ತಿವೆ. ಕೇಂದ್ರ ಸರ್ಕಾರ ಇಂತಹ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರಿಗೆ ಗುಂಡಿಕ್ಕಿ ದಹನ ಮಾಡುವವರು, ಸಂವಿಧಾನ ಬದಲಿಸುತ್ತೇವೆ ಎಂದು ಹೇಳುವವರು ನಿಜವಾದ ದೇಶ ದ್ರೋಹಿಗಳು. ಲೋಕಸಭೆ ಚುನಾವಣೆಯಲ್ಲಿ ದೇಶದ ಅಭಿವೃದ್ಧಿ ಕುರಿತು ಮತ ಕೇಳಬೇಕು.ಆದರೆ ಇಂದು ಈ ರೀತಿಯ ಸಂಘರ್ಷಗಳನ್ನು ಉಂಟು ಮಾಡುತ್ತಿರುವುದು ವಿಪರ್ಯಾಸ. ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಪ್ರತಿಭಟನೆ ವೇಳೆ ಬಿಬಿಎಂಪಿ ಸದಸ್ಯ ರಾಮಚಂದ್ರ, ಕಾಂಗ್ರೆಸ್ ಮುಖಂಡರಾದ ಸಲೀಂ, ಶೇಖರ್, ಮದನ್, ಮುರಳಿ, ರಾಮಕೃಷ್ಣ, ಹೇಮರಾಜ್, ಆಶಾರಾಜ್, ಕೋಕಿಲ ಮತ್ತಿತರರು ಭಾಗವಹಿಸಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ