ಬೆಂಗಳೂರು, ಫೆ.4-ಅಂತರ್ಜಲ ಅಭಿವೃದ್ಧಿಗೆ ರೂಪಿಸಲಾಗಿರುವ ಯೋಜನೆಗಳನ್ನು ಸಮರೋಪಾದಿಯಲ್ಲಿ ಜಾರಿಗೆ ತರಬೇಕು ಹಾಗೂ ನೀರಿನ ಆಸರೆಗಳ ಗಣತಿ ಕಾರ್ಯವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.
ಸಣ್ಣನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಆರನೇ ಸಣ್ಣ ನೀರಾವರಿ, ನೀರಿನಾಶ್ರಯ ಗಣತಿ ಕಾರ್ಯ ಕುರಿತ ರಾಜ್ಯಮಟ್ಟದ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವರ್ಷಾನುಗಟ್ಟಲೆ ನೀರನ್ನೇ ಕಾಣದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕು ಎಂದರು.
ಅಂತರ್ಜಲ ಕಾರ್ಯಕ್ರಮಗಳ ಅಭಿವೃದ್ಧಿಯಡಿ ವ್ಯರ್ಥವಾಗಿ ಹರಿದು ಹೋಗುವ ನೀರು ಸಂಗ್ರಹಿಸಿ ಇಂಗಿಸುವ ಕಾರ್ಯ ಆಗಬೇಕು.ನೆರೆಯ ತಮಿಳುನಾಡಿನಲ್ಲಿ 60ರಿಂದ 70 ಅಡಿಗೆ ನೀರು ಸಿಗುತ್ತದೆ.ಆದರೆ, ನಮ್ಮ ರಾಜ್ಯದಲ್ಲಿ ಸಾವಿರಾರು ಅಡಿ ಆಳಕ್ಕೆ ಅಂತರ್ಜಲ ಕುಸಿದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಗಲವಾದ ಬಾವಿ, ಆಳದವಾದ ಕೊಳವೆಬಾವಿ , ಮಧ್ಯಮ ಕೊಳವೆ ಬಾವಿ ಎಂದು ವಿಂಗಡಿಸಲಾಗಿದೆ. ತಮಿಳುನಾಡು ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಒತ್ತು ನೀಡುವಂತೆ ಹೇಳಿದರು.
ಗ್ರಾಮ ಪಂಚಾಯ್ತಿಯಿಂದ ಬೃಹತ್ ಮಹಾನಗರ ಪಾಲಿಕೆಯವರೆಗೂ ಕೆರೆಗಳ ಸಂರಕ್ಷಣೆ ಮತ್ತು ಕೆರೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಬೇಕು.ಈ ನಿಟ್ಟಿನಲ್ಲಿ ಸರ್ಕಾರ ವಿಶೇಷ ಗಮನಹರಿಸಿದ್ದು, ಅಧಿಕಾರಿಗಳು ಕೂಡ ಯೋಜನೆಯನ್ನು ಅನುಷ್ಠಾನಗೊಳಿಸಲು ಕಾರ್ಯಗಳನ್ನು ರೂಪಿಸಿಬೇಕೆಂದು ತಿಳಿಸಿದರು.
ಮುಂದಿನ ಲೋಕಸಭೆ ಚುನಾವಣೆ ನೆಪವೊಡ್ಡಿ ಮಹತ್ವದ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಮಾಡಬಾರದು ಎಂದು ತಾಕೀತು ಮಾಡಿದ ಸಚಿವರು, ಘಟಪ್ರಭಾ ನದಿಗೆ ಒಂದೂವರೆ ಕೋಟಿ ರೂ.ವೆಚ್ಚದಲ್ಲಿ ಚೆಕ್ ಡ್ಯಾಮ್ ನಿರ್ಮಿಸಿರುವುದು ಹೆಚ್ಚು ಉಪಯುಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಮುಖ್ಯ ಇಂಜನಿನಿಯರ್ ಎಂ.ರವೀಂದ್ರಪ್ಪ, ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಆರ್ಥಿಕ ಮತ್ತು ಸಾಂಖಿಕ ನಿರ್ದೇಶನಾಲಯದ ನಿರ್ದೇಶಕರಾದ ಡಾ.ವಸುಂಧರಾದೇವಿ ಮತ್ತಿತರರಿದ್ದರು.