ಸಿ.ಎಂ.ಕುಮಾರಸ್ವಾಮಿಯವರು ಬಜೆಟ್ ಮಂಡನೆ ಮಾಡುವುದು ಅನುಮಾನ:ಮಾಜಿ ಸಚಿವ ಲಕ್ಷ್ಮಣ್ ಸವದಿ

ಬೆಂಗಳೂರು, ಫೆ.4-ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಲಕ್ಷ್ಮಣ್ ಸವದಿ ಅವರು, ಸರ್ಕಾರದ ಬಗ್ಗೆ ಮಾಧ್ಯಮಗಳ ವರದಿ ಗಮನಿಸಿದರೆ ರಾಜ್ಯ ಸರ್ಕಾರ ತೊಂದರೆಯಲ್ಲಿದೆ ಹಾಗೂ ಅವರಲ್ಲಿ ಭಿನ್ನಾಭಿಪ್ರಾಯ ತೀವ್ರವಾಗಿದೆ. ಹಾಗಾಗಿ ಕುಮಾರಸ್ವಾಮಿಯವರು ಬಜೆಟ್ ಮಂಡನೆ ಮಾಡುವುದು ಅನುಮಾನ ಎಂದು ಹೇಳಿದರು.

ಮೋದಿಗೆ ಅಭಿನಂದನೆ:
ಬಜೆಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ 1,49,981 ಕೋಟಿ ರೂ.ಗಳನ್ನು ಮೀಸಲಿರಿಸುವ ಮೂಲಕ ಕೇಂದ್ರ ಸರ್ಕಾರ ಈ ಕ್ಷೇತ್ರಕ್ಕೆ ಶಕ್ತಿ ತುಂಬಿದೆ. ಈ ನಿಟ್ಟಿನಲ್ಲಿ ಮೋದಿಗೆ ಅಭಿನಂದನೆ ಸಲ್ಲಿಸಲು ಹಾಗೂ ಬಜೆಟ್ ಬಗ್ಗೆ ಪ್ರತಿ ಲೋಕಸಭೆ, ಜಿಲ್ಲಾ ಮಟ್ಟದಲ್ಲಿ ಪ್ರಚಾರ ನಡೆಸುವ ಕಾರ್ಯ ಕೈಗೊಂಡಿದ್ದೇವೆ ಎಂದು ರೈತ ಮೋರ್ಚಾ ರಾಜ್ಯಾಧ್ಯಕ್ಷ ಲಕ್ಷ್ಮಣ್‍ಸವದಿ ತಿಳಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ನಾಳೆಯಿಂದಲೇ ಪ್ರವಾಸ ಆರಂಭಿಸಲಿದ್ದು, ರೈತ ಮೋರ್ಚಾದಿಂದಲೇ 10 ತಂಡಗಳನ್ನು ರಚಿಸಿ ಎಲ್ಲೆಡೆ ಬಜೆಟ್ ಬಗ್ಗೆ ಪ್ರಚಾರ ಕೈಗೊಳ್ಳುವ ಬಗ್ಗೆ ಮೋದಿ ಬಜೆಟ್‍ಗೆ ಅಭಿನಂದನೆ ಸಲ್ಲಿಸುವ ಸಮಾರಂಭವನ್ನು ನಡೆಸಲಿದ್ದೇವೆ ಎಂದು ಹೇಳಿದರು.

ಫೆ.18ರಂದು ರಾಜ್ಯಾದ್ಯಂತ 4ಸಾವಿರ ತಾಲ್ಲೂಕು ಪಂಚಾಯ್ತಿಗಳಲ್ಲಿ ಗೋ ಪೂಜೆ ನಡೆಸಲಾಗುತ್ತಿದೆ ಎಂದ ಅವರು, ಫೆ.23 ಮತ್ತು 24ರಂದು ಉತ್ತರ ಪ್ರದೇಶದ ಗೋರಕ್‍ಪುರದಲ್ಲಿ ನಡೆಯಲಿರುವ ಕಿಸಾನ್ ಮೋರ್ಚಾ ಸಮಾವೇಶದಲ್ಲಿ ರಾಜ್ಯದ ಎಲ್ಲಾ ಪದಾಧಿಕಾರಿಗಳು ಭಾಗಿಯಾಗಲಿದ್ದು, ಒಂದು ಲಕ್ಷಕ್ಕೂ ಹೆಚ್ಚು ಮಂದಿ ಅದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಪ್ರತಿ ವರ್ಷ ರೈತರಿಗೆ 6ಸಾವಿರ ರೂ.ಸಹಾಯ ಧನ ಕೇಂದ್ರದಿಂದ ನೀಡಲು ಬಜೆಟ್‍ನಲ್ಲಿ ಘೋಷಿಸಲಾಗಿದೆ.ಸ್ವಾಮಿನಾಥನ್ ವರದಿ ಅನುಷ್ಠಾನಕ್ಕೆ ರೈತರು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ಅವರು ಈ ಸಹಾಯ ಧನವನ್ನು ಘೋಷಿಸಿದ್ದಾರೆ.

ಅಲ್ಲದೆ, ಶೇ.2ರೂ.ಬಡ್ಡಿ ದರದಲ್ಲಿ 850 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದಾರೆ.ಪ್ರಾಮಾಣಿಕ ರೈತರಿಗೆ ಹಾಗೂ ಅವಧಿಗೂ ಮುನ್ನ ಸಾಲ ತೀರಿಸಿದ ರೈತರಿಗೆ ಸಬ್ಸಿಡಿಯಡಿ ಸಾಲ ನೀಡುವ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.

ಅನೇಕ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಬ್ಬಿನ ಬಾಕಿ ಹಣ ಕೊಟ್ಟಿಲ್ಲ. 2750ರೂ.ಎಫ್‍ಆರ್‍ಪಿ ಬಿಡುಗಡೆಯಾಗಿಲ್ಲ. ಎಲ್ಲಾ ಕಾರ್ಖಾನೆಗಳು 2900ರೂ.ಗಳನ್ನು ಘೋಷಣೆ ಮಾಡಿದ್ದವು.ಆದರೆ, ರಾಜ್ಯ ಸರ್ಕಾರ ಹಣ ಕೊಡಿಸುವ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.

ಕೇವಲ ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ.ತಕ್ಷಣ ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ರೈತರ ಕಬ್ಬು ಬೆಳೆ ಬಾಕಿ ಹಣವನ್ನು ಕೊಡಿಸಬೇಕು. ಸಕ್ಕರೆ ಕಾರ್ಖಾನೆಗಳೂ ಉಳಿಯಬೇಕು.ರೈತರೂ ಬದುಕಬೇಕು. ಈ ನಿಟ್ಟಿನಲ್ಲಿ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ