ಬೆಂಗಳೂರು, ಫೆ.3- ದೇಶದಲ್ಲಿ ಜಾತ್ಯತೀತರು ಮತ್ತು ಅಲ್ಪಸಂಖ್ಯಾತರು ಭಯದ ನೆರಳಿನಲ್ಲಿ ಬದುಕುವಂತಹ ವಾತಾವರಣ ನಿರ್ಮಾಣವಾಗಿದೆ.
ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದವರು ಮುಸ್ಲಿಮರೇ ಅಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಆಲ್ ಇಂಡಿಯಾ ಜಮೀಯತ್ಉಲ್ ಮನ್ಸೂರ್ ಸಂಘಟನೆ ಆಯೋಜಿಸಿದ್ದ ನದಾಫ್ ಪಿಂಜಾರ ಹಾಗೂ ಮನ್ಸೂರಿ ಸಮಾಜಗಳ ರಾಷ್ಟ್ರೀಯ ಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬದಲಾವಣೆಗಾಗಿ 2014ರ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿ ನರೇಂದ್ರ ಮೋದಿಯವರನ್ನು ಪ್ರಧಾನಮಂತ್ರಿ ಮಾಡಲಾಯಿತು. ಆದರೆ ಅವರು ಕೊಟ್ಟ ಒಂದು ಭರವಸೆಯನ್ನೂ ಈಡೇರಿಸಿಲ್ಲ. ಬದಲಾಗಿ ದೇಶದಲ್ಲಿ ಅಸಮಾನತೆ, ಆರ್ಥಿಕ ಸಂಕಷ್ಟ ಸೇರಿದಂತೆ ದೊಡ್ಡ ದೊಡ್ಡ ಸಮಸ್ಯೆಗಳನ್ನು ಹುಟ್ಟು ಹಾಕಿದ್ದಾರೆ.ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಮುಂದೆ ಹೀಗಾಗಬಾರದೆಂದರೆ ಮುಸ್ಲಿಮರು ಜಾತ್ಯತೀತ ಪಕ್ಷಕ್ಕೆ ಮತ ಹಾಕಬೇಕು ಎಂದು ಕರೆ ನೀಡಿದರು.
ಉತ್ತರ ಪ್ರದೇಶ ಚುನಾವಣೆಯಲ್ಲಿ ಜಾತ್ಯತೀತ ಪಕ್ಷಗಳಾದ ಸಮಾಜವಾದಿ ಮತ್ತು ಬಿಎಸ್ಪಿ ಒಂದಾಗಿಲ್ಲ. ಹೀಗಾಗಿ ಅಲ್ಲಿ ಜಾತ್ಯತೀತರು ಸೋಲುವಂತಾಯಿತು. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರದಲ್ಲೂ ಮುಸ್ಲಿಂ ಮತದಾರರು 3 ರಿಂದ 4 ಲಕ್ಷ ಮಂದಿಯಿದ್ದಾರೆ. ಎಲ್ಲರೂ ಒಟ್ಟಾಗಿ ಜಾತ್ಯತೀತ ಪಕ್ಷಕ್ಕೆ ಮತ ಹಾಕಿದರೆ ಬಿಜೆಪಿ ಸೋಲಿಸುವುದು ಸುಲಭ. ಮುಸ್ಲಿಮರು ಬೆಂಬಲಿಸಿದರೆ ಕಾಂಗ್ರೆಸ್ 20ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಸಾಧ್ಯವಿದೆ. ವಿಧಾನಸಭೆ ಚುನಾವಣೆಯಲ್ಲೂ 70 ರಿಂದ 80 ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರೇ ನಿರ್ಣಾಯಕ ಮತದಾರರು ಎಂದು ಅವರು ಹೇಳಿದರು.
ರಾಜ್ಯದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ 85 ಲಕ್ಷದಷ್ಟಿದೆ. ಅದರಲ್ಲಿ ನದಾಫ್, ಪಿಂಜಾರ, ಮನ್ಸೂರಿ ಸಮಾಜಗಳ ಜನಸಂಖ್ಯೆ 30ಲಕ್ಷಕ್ಕೂ ಹೆಚ್ಚಿದೆ.ಈ ವರ್ಷಗಳ ಅಭಿವೃದ್ಧಿಗಾಗಿ ಬಜೆಟ್ನಲ್ಲಿ ವಿಶೇಷ ಅನುದಾನ ಮೀಸಲಿಡಲಾಗುವುದು. ಜಾತಿ ಪ್ರಮಾಣಪತ್ರ ಹಾಗೂ ಇತರ ಗೊಂದಲಗಳನ್ನು ನಿವಾರಿಸಲು ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹೇಳಿದಂತೆ ಅಚ್ಚೇ ದಿನ್ ಬರಲೇ ಇಲ್ಲ. ವಿದೇಶದಲ್ಲಿರುವ ಕಪ್ಪು ಹಣ ಭಾರತಕ್ಕೆ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ದರು. ಅದು ಈಡೇರಲೇ ಇಲ್ಲ. ಕಾಳಧನವನ್ನು ನಿಯಂತ್ರಿಸುವ ಸಲುವಾಗಿ ನೋಟ್ ಬ್ಯಾನ್ ಮಾಡಿದರು.ಅದರಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದು, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು ಎಂದು ಅವರು ಆರೋಪಿಸಿದರು.
ನಮಗೆ ಮನ್ ಕೀ ಬಾತ್ ಬೇಕಿಲ್ಲ. ಕಾಮ್ ಕೀ ಬಾತ್ ಬೇಕಿದೆ.ಭಾಷಣ ಮಾಡಿಕೊಂಡು ಕಾಲಕಳೆಯುವ ಬಿಜೆಪಿ ಮತ್ತು ಮೋದಿಯವರನ್ನು ಸೋಲಿಸಿ ಮನೆಗೆ ಕಳುಹಿಸಬೇಕೆಂದು ಜಮೀರ್ ಕರೆ ನೀಡಿದರು.
ಉತ್ತರ ಪ್ರದೇಶದ ಮಾಜಿ ಸಚಿವ ಆರ್.ಎ. ಉಸ್ಮಾನಿ ಮನ್ಸೂರಿ, ಶಾಸಕ ಮೊಹಿದ್ದೀನ್ ಶಮ್ಸ್, ಆಲ್ ಇಂಡಿಯಾ ಜಮೀಯತ್ ಉಲ್ ಮನ್ಸೂರ್ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಜಾವೇದ್ ಇಕ್ಬಾಲ್ ಮನ್ಸೂರಿ ಮತ್ತಿತರರು ಭಾಗವಹಿಸಿದ್ದರು.