ಬೆಂಗಳೂರು, ಫೆ.3- ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿ ಸರ್ಕಾರವನ್ನು ಬೆಂಬಲಿಸದಿದ್ದರೆ ನಾವೇ ಸರ್ಕಾರ ರಚಿಸುವ ಪ್ರಯತ್ನ ಮಾಡುತ್ತೇವೆ ಎಂದು ಹೇಳುವ ಮೂಲಕ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಆಪರೇಷನ್ ಕಮಲದ ಸುಳಿವು ನೀಡಿದ್ದಾರೆ.
ಖಾಸಗಿ ಹೊಟೇಲ್‍ನಲ್ಲಿ ನಡೆದ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾರ್ಯಕರ್ತರು, ಪದಾಧಿಕಾರಿಗಳು, ಚುನಾವಣಾ ಉಸ್ತುವಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಇಂದಿನ ಪರಿಸ್ಥಿತಿ ನೋಡಿದರೆ ಬಿಜೆಪಿ ಅನಿವಾರ್ಯವಾಗಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ. ಜನರ ರಕ್ಷಣೆಗೆ ಬಿಜೆಪಿ ಕೈಗೊಳ್ಳುತ್ತಿರುವ ನಿರ್ಧಾರ ಇದಾಗಿದೆ. ಸಮಯ-ಸಂದರ್ಭಕ್ಕೆ ತಕ್ಕ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿ ಸರ್ಕಾರವನ್ನು ಬೆಂಬಲಿಸದಿದ್ದರೆ ನಾವೇ ಸರ್ಕಾರ ರಚಿಸಲು ಮುಂದಾಗುತ್ತೇವೆ ಎಂದು ಹೇಳಿದರು.
ಅವರವರ ಕೋಟೆಯೊಳಗೆ ಅವರವರ ಸೈನಿಕರಿಂದಲೇ ಕಾರ್ಯಾಚರಣೆ ನಡೆಯುತ್ತಿದೆ.ಕೆಲವು ಕಾಂಗ್ರೆಸ್ ಶಾಸಕರು ಕಣ್ಮರೆಯಾಗಿದ್ದಾರೆ.ಆ ಶಾಸಕರನ್ನು ಹುಡುಕಿ ಹಿಡಿಯಲು ಅವರಿಂದ ಆಗುತ್ತಿಲ್ಲ. ಇಂತವರೇನು ಆಡಳಿತ ನಡೆಸುತ್ತಾರೆ.ಕಂಪ್ಲಿ ಶಾಸಕ ಗಣೇಶ್ ಅವರನ್ನು ಹಿಡಿಯಲಿಕ್ಕೇ ಆಗಿಲ್ಲ. ಇನ್ನು ರವಿ ಪೂಜಾರಿಯನ್ನು ನಾವೇ ಹಿಡುದ್ವಿ ಅಂತಿದ್ದಾರೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಟಾಂಗ್ ನೀಡಿದರು.
ಈ ಎಲ್ಲ ಪರಿಸ್ಥಿತಿಗಳನ್ನು ಗಮನಿಸಿದರೆ ಜನರನ್ನು ರಕ್ಷಣೆ ಮಾಡಲು ನಾವು ಅಧಿಕಾರಕ್ಕೆ ಬರಬೇಕಿದೆ ಎಂದು ಹೇಳಿದರು.
ಕೇಂದ್ರದ ಬಜೆಟ್ ಚುನಾವಣಾ ಬಜೆಟ್ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.ನೋಡೋಣ ಅವರು ಎಂತಹ ಬಜೆಟ್ ಕೊಡ್ತಾರೆ.ಅವರಿಗೆ ಬಜೆಟ್ ಮಂಡಿಸುವ ಸಂದರ್ಭ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಅಂತಹ ಸನ್ನಿವೇಶ ಸಮ್ಮಿಶ್ರ ಸರ್ಕಾರದಲ್ಲಿ ಸೃಷ್ಟಿಯಾಗಿದೆ. ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಡುತ್ತಾರೆ ಎಂಬ ಭೀತಿ ಅವರಲ್ಲಿದೆ ಎಂದರು.
ಬೆಂಗಳೂರು ಉತ್ತರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸ್ಪರ್ಧಿಸಿದರೂ ಅವರ ವಿರುದ್ಧ ಸ್ಪರ್ಧಿಸಿ ನಾನು ಜಯಗಳಿಸುತ್ತೇನೆ. ಸೆಣೆಸಾಡಿದರೆ ಬಲಿಷ್ಠರೊಡನೆ ಸೆಣೆಸಾಡಬೇಕು.ನನ್ನ ಮುಖದಲ್ಲಿ ನಿಮಗೆ ಭಯ ಕಾಣಿಸಿದರೆ ನಾನೇನು ಮಾಡಲು ಆಗುವುದಿಲ್ಲ. ಕಳೆದ ಚುನಾವಣೆಯಲ್ಲಿ ಬೆಂಗಳೂರು ಉತ್ತರದಲ್ಲಿ ನಮಗೆ ಹಿನ್ನಡೆಯಾಗಿತ್ತು.ಆ ದೋಷಗಳನ್ನು ಸರಿಪಡಿಸಿಕೊಂಡು ನಾವು ಮುಂದುವರಿಯುತ್ತೇವೆ ಎಂದು ಹೇಳಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕಾದರೆ ನಾವು ಮೂರು ತಿಂಗಳು ಫುಲ್‍ಟೈಮ್ ವರ್ಕರ್ಸ್ ಆಗಬೇಕು.ಅವರು ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಾರೆ.ಒಂದು ಕಾಲದಲ್ಲಿ ಕಾಂಗ್ರೆಸ್ ವರ್ಸಸ್ ಅದರ್ಸ್ ಅಂತ ಇತ್ತು.ಈಗ ಬಿಜೆಪಿ ವರ್ಸಸ್ ಅದರ್ಸ್ ಆಗಿದೆ.ಬಿಜೆಪಿ ವಿರುದ್ಧ ಕಳ್ಳರೆಲ್ಲ ಒಂದಾಗಿದ್ದಾರೆ ಎಂದು ಆರೋಪಿಸಿದರು.
ನಮ್ಮ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಶಾಲೆಯ ಮಕ್ಕಳಿಗೆ ಎರಡು ಜೊತೆ ಬಟ್ಟೆ ಕೊಡಲು ಆಗುತ್ತಿಲ್ಲ ಎಂದರು.
ದೇವೇಗೌಡರು ರಾಜಕಾರಣಕ್ಕೆ ಬಂದಾಗ 3.5 ಎಕರೆ ಜಮೀನಿತ್ತು. ಈಗ ಸಾವಿರಾರು ಎಕರೆ ಇದೆ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ವಾಚು, ಕಾರು ಸೇರಿದಂತೆ ಕೋಟ್ಯಂತರ ರೂ. ಮೌಲ್ಯದ ಗಿಫ್ಟ್‍ಗಳು ಬರುತ್ತವೆ. ಇವರಿಗೆ ರೈತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಹೇಳಿದರು.