ನವದೆಹಲಿ: ಭಾನುವಾರ ಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಬಿಹಾರದ ರಾಜಧಾನಿ ಪಾಟ್ನಾ ಸಮೀಪ ಸಂಭವಿಸಿದ ರೈಲು ದುರಂತದಲ್ಲಿ ಕನಿಷ್ಟ 7 ಮಂದಿ ಮೃತಪಟ್ಟಿದ್ದು, ಅನೇಕರು ಗಾಯಗೊಂಡಿದ್ದಾರೆ.
ಸೀಮಾಂಚಲ್ ಎಕ್ಸ್ಪ್ರೆಸ್ ಬಿಹಾರದ ಜೋಗ್ಬನಿಯಿಂದ ದೆಹಲಿಯ ಆನಂದ್ ವಿಹಾರ್ಗೆ ತೆರಳುತ್ತಿತ್ತು. ಬೆಳಗ್ಗೆ 4 ಗಂಟೆ ಸುಮಾರಿಗೆ ವೈಶಾಲಿ ಜಿಲ್ಲೆಯ ಸಹದಾಯ್ ಬುಜರ್ಗ್ನಲ್ಲಿ ರೈಲು ಹಳಿ ತಪ್ಪಿದೆ. ಈ ವೇಳೆ 11 ಬೋಗಿಗಳು ನೆಲಕ್ಕುರುಳಿವೆ. ಘಟನೆ ನಡೆಯುವ ಸಂದರ್ಭದಲ್ಲಿ ರೈಲು ಬಹಳ ವೇಗವಾಗಿ ಸಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಲಾ ಒಂದು ಜನರಲ್ ಕೋಚ್, ಎಸಿ ಕೋಚ್, 3 ಸ್ಲೀಪರ್ ಕೋಚ್ಗಳು ಸೇರಿ ಒಟ್ಟು 9 ಬೋಗಿಗಳು ಹಳಿ ತಪ್ಪಿವೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುತ್ತಿದ್ದಾರೆ. ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್, “ರೈಲು ಅಪಘಾತಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ,” ಎಂದಿದ್ದಾರೆ.
Help lines:
Sonpur 06158221645
Hajipur 06224272230
Barauni 06279232222
ರೈಲ್ವೆ ಇಲಾಖೆ ಹೆಲ್ಪ್ಲೈನ್ಗಳನ್ನು ಆರಂಭಿಸಿದೆ. ರೈಲು ಅಪಘಾತಕ್ಕೆ ಸೂಕ್ತ ಕಾರಣ ಏನು ಎಂಬುದನ್ನು ಪತ್ತೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಈ ಬಗ್ಗೆ ಹೆಚ್ಚಿನ ತನಿಖೆ ನಡೆದ ಬಳಿಕವೇ ಸೂಕ್ತ ಕಾರಣ ತಿಳಿದುಬರಬೇಕಿದೆ.