ಪ್ರಧಾನಿ ನರೇಂದ್ರ ಮೋದಿಗೆ ಕಂಟಕವಾಗಿರುವ ಮೂವರು ಮಹಿಳೆಯರು

ಬೆಂಗಳೂರು:  ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಸ್ಪಷ್ಟ ಜನಾದೇಶ ಪಡೆದು ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕನಸಿಗೆ ಮೂವರು ಮಹಿಳಾ ಮಣಿಯರಿಂದಲೇ ಕಂಟಕ ಎದುರಾಗುವ ಸಾಧ್ಯತೆ ಇದೆ.

ಪ್ರಧಾನಿ ಮೋದಿ ವಿರುದ್ಧ ಕಳೆದ ಐದು ವರ್ಷಗಳಿಂದ ಬೆಂಕಿ ಉಗುಳುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಎಸ್‍ಪಿ ನಾಯಕಿ ಮಾಯಾವತಿ ಹಾಗೂ ಇತ್ತೀಚೆಗಷ್ಟೇ ಸಕ್ರೀಯ ರಾಜಕಾರಣಕ್ಕೆ ಕಾಲಿಟ್ಟಿರುವ ನೆಹರು ವಂಶದ ಮೂರನೇ ಕುಡಿ ಪ್ರಿಯಾಂಕ ವಾದ್ರಾ ಅವರುಗಳಿಂದಲೇ ಮೋದಿ ಕನಸು ನುಚ್ಚುನೂರಾಗುವ ಸಂಭವವಿದೆ.

ಕಾರಣ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸಾಕಷ್ಟು ಪ್ರಬಲವಾಗಿದ್ದು, ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಆಡಳಿತಾರೂಢ ಪಕ್ಷವೇ ಲೋಕಸಬೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳಿಸುವ ಸಾಧ್ಯತೆ ಇದೆ ಎಂದು ಹೇಳಿದೆ.

ಇನ್ನು ಉತ್ತರಪ್ರದೇಶದಲ್ಲಿ ಮಾಯಾವತಿ-ಅಖಿಲೇಶ್ ಜೋಡಿ ತಮ್ಮ ಹಳೆಯ ವೈಮನಸ್ಸುಗಳನ್ನು ಮರೆತು ಒಂದಾಗಿರುವುದು ಬಿಜೆಪಿಯ ನಿದ್ದೆಗೆಡುವಂತೆ ಮಾಡಿದೆ.

ಈ ಬೆಳವಣಿಗೆಗಳ ನಡುವೆಯೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕ ವಾದ್ರಾ ಉತ್ತರಪ್ರದೇಶದ ಪಶ್ಚಿಮ ವಿಭಾಗದ ಉಸ್ತುವಾರಿಯಾಗಿ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವುದು ಕಮಲಯ ಪಾಳೆಯದ ಗಾಯಕ್ಕೆ ಇನ್ನಷ್ಟು ಬರೆ ಎಳೆದಂತಾಗಿದೆ.

ಎಸ್ಪಿ-ಬಿಎಸ್ಪಿ ಒಂದಾಗಿರುವುದರಿಂದ ಬಿಜೆಪಿಯ ನಾಗಾಲೋಟಕ್ಕೆ ಕಡಿವಾಣ ಬೀಳಲಿದೆ ಎಂಬುದು ಸಮೀಕ್ಷೆಗಳಿಂದಲೇ ಹೊರಬೀಳುತ್ತದೆ. ಇದರ ಜೊತೆಗೆ ಉತ್ತರಪ್ರದೇಶದ ಪಶ್ಚಿಮ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ.ಈ ಭಾಗದಲ್ಲೇ ಪ್ರಿಯಾಂಕ ವಾದ್ರಾ ಸಕ್ರಿಯರಾಗುತ್ತಿರುವುದು ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಮಮತಾ ಬ್ಯಾನರ್ಜಿ, ಮಾಯಾವತಿ ಹಾಗೂ ಪ್ರಿಯಾಂಕ ವಾದ್ರಾ ಒಂದಾಗಿ ಚುನಾವಣಾ ಪ್ರಚಾರ ನಡೆಸಿದರೆ ಪಶ್ಚಿಮ ಬಂಗಾಳ, ಉತ್ತರಪ್ರದೇಶ ಸೇರಿದಂತೆ ಹಿಂದಿ ರಾಜ್ಯಗಳಲ್ಲಿ ಬಿಜೆಪಿಗೆ ಮರ್ಮಾಘಾತವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ ಅತಂತ್ರ ಪರಿಸ್ಥಿತಿ ನಿರ್ಮಾಣವಾದರೆ ನರೇಂದ್ರ ಮೋದಿ ಕನಸಿಗೆ ಕಲ್ಲು ಬೀಳಲಿದೆ. ಹಠಮಾರಿ ಸ್ವಭಾವದ ಮಾಯಾವತಿ ಮತ್ತು ಮಮತಾ ಬ್ಯಾನರ್ಜಿ ಬಿಜೆಪಿಗೆ ಬೆಂಬಲ ನೀಡುವುದು ಅನುಮಾನ ಎಂದು ಕೇಳಲಾಗುತ್ತಿದೆ.

ಇದೆಲ್ಲವನ್ನೂ ಲೆಕ್ಕಾಚಾರ ಹಾಕಿರುವ ಬಿಜೆಪಿ ಉತ್ತರ ಭಾರತದಲ್ಲಿ ನಷ್ಟವಾಗಲಿರುವುದನ್ನು ಮಧ್ಯಭಾರತ ಹಾಗೂ ದಕ್ಷಿಣ ಭಾರತದಲ್ಲಿ ಸರಿದೂಗಿಸಲು ರಣತಂತ್ರ ರೂಪಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ