ನವದೆಹಲಿ: ಎನ್ಡಿಎಆಡಳಿತಾವಧಿಯ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರದ ಕೊನೆಯ ಹಾಗೂ ಮಧ್ಯಂತರ ಬಜೆಟ್ ಮೇಲೆ ದೇಶಾದ್ಯಂತ ಜನರು ನಿರೀಕ್ಷೆಗಳ ಮೂಟೆಯನ್ನೇ ಇರಿಸಿಕೊಂಡಿದ್ದಾರೆ.
ಕೆಲವೇ ತಿಂಗಳಲ್ಲಿ ಲೋಕಸಭೆಯ ಸಾರ್ವತ್ರಿಕ ಚುನಾವಣೆ ಎದುರಾಗುವುದರಿಂದ ಮತ ಭೇಟೆಯ ಘೋಷಣೆಗಳು ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ ಕೃಷಿಕರ, ಮಧ್ಯಮ ವರ್ಗದವರ, ಉದ್ಯಮಿಗಳ ಮೇಲೆ ಕೇಂದ್ರೀಕರಿಸಿ ಈ ಆಯವ್ಯಯ ಮಂಡನೆ ಆಗಲಿದೆ ಎಂದು ರಾಜಕೀಯ ವಲಯದ ಪರಿಣಿತರ ದಂಡು ಅಂದಾಜಿಸಿದೆ. ಹಂಗಾಮಿ ಹಣಕಾಸು ಸಚಿವ ತಮ್ಮ ಚೊಚ್ಚಲ ಬಜೆಟ್ ಕೇಲವೆ ಗಂಟೆಗಳಲ್ಲಿ ಆರಂಭವಾಗಲಿದೆ. ಇದಕ್ಕಾಗಿ ಸಂಸತ್ ಸಕಲ ರೀತಿಯಲ್ಲಿ ಸನ್ನದ್ಧಗೊಂಡಿದೆ.
ಕಳೆದ ವಾರದ ಕುಸಿತದ ಹಾದಿಯಲ್ಲಿ ಸಾಗಿದ್ದ ಮುಂಬೈ ಷೇರುಪೇಟೆ ಸೂಚ್ಯಂಕ ಗುರುವಾರದ ಪೇಟೆಯಲ್ಲಿ ಬಿಎಸ್ಇ ಸೆನ್ಸೆಕ್ಸ್ 665 ಅಂಕಗಳಷ್ಟು ಏರಿಕೆಯಾಗಿ 36,256 ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ- 175 ಅಂಕಗಳ ಭರ್ಜರಿ ಜಿಗಿತಕಂಡು ಹೂಡಿಕೆದಾರರಲ್ಲಿ ಚೈತನ್ಯ ತುಂಬಿತು.
ಇಂದೂ ಸಹ ಷೇರುಪೇಟೆ ಸಕಾರಾತ್ಮಕ ದಿಶೆಯಲ್ಲೇ ಮುನ್ನಡೆಯುತ್ತಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಅಧಿವೇಶನದ ಭಾಷಣದಲ್ಲಿ ಕೃಷಿ- ಗ್ರಾಮೀಣ, ಮಧ್ಯಮ ಮತ್ತು ಬಡವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚಿಸಿದ ಹಿನ್ನಲೆಯಲ್ಲಿ ಲೇಖಾನುದಾನದಲ್ಲಿ ಭಾರೀ ನಿರೀಕ್ಷೆ ಮೂಡಿದೆ. ಜೊತೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಸಹ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಜಿಗತಕ್ಕೆ ಇಂಬು ನೀಡಿತು.