ಕೇಂದ್ರದ ಕೊನೆಯ ಬಜೆಟ್​ನಲ್ಲಿ ಸಾಮಾನ್ಯರಿಗೆ ಸಿಗಲಿದೆ ಬಂಪರ್ ಆಫರ್?; ಮತದಾರರನ್ನು ಸೆಳೆಯಲು ಕೇಂದ್ರದ ಹೊಸ ತಂತ್ರ

ನವದೆಹಲಿ: ಸತತ ಗೆಲುವಿನಿಂದ ಬೀಗುತ್ತಿದ್ದ ಬಿಜೆಪಿಗೆ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಿಸಿಮುಟ್ಟಿಸಿದೆ. ಐದು ರಾಜ್ಯಗಳ ಪೈಕಿ ಒಂದು ಕಡೆಯಲ್ಲೂ ಸರ್ಕಾರ ರಚಿಸಲು ಬಿಜೆಪಿ ಬಳಿ ಸಾಧ್ಯವಾಗಿಲ್ಲ. ಜನರು ನೀಡಿರುವ ತೀರ್ಪಿನಿಂದ ಎಚ್ಚೆತ್ತುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕೊನೆಯ ಬಜೆಟ್​ನಲ್ಲಿ ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಲು ಮುಂದಾಗಿದ್ದಾರೆ.

2019ರ ಫೆ.1ರಂದು ಕೇಂದ್ರ ವಿತ್ತ ಸಚಿವ ಅರುಣ್​ ಜೇಟ್ಲಿ ಬಜೆಟ್ ಘೋಷಣೆ ಮಾಡಲಿದ್ದಾರೆ. ಈ ವೇಳೆ ಬಡವರು ಹಾಗೂ ರೈತರನ್ನು ಗಮನದಲ್ಲಿಟ್ಟುಕೊಂಡು ಬಜೆಟ್​ ಸಿದ್ಧಪಡಿಸುವ ಯೋಚನೆ ಕೇಂದ್ರದ್ದು. ಬಡವರಿಗೆ ಸಾರ್ವತ್ರಿಕ ಮೂಲ ಆದಾಯ ನೀಡುವ ಆಲೋಚನೆಯನ್ನೂ ಕೇಂದ್ರ ಇಟ್ಟುಕೊಂಡಿದೆ. ರಾಜಸ್ಥಾನದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲೂ ಬಿಜೆಪಿ ಇದೇ ಮಾದರಿಯ ವಾಗ್ದಾನ ನೀಡಿತ್ತು.

ಸುದ್ದಿ ವಾಹಿನಿಯೊಂದರ ಜತೆ ಮಾತನಾಡಿರುವ ಕೇಂದ್ರ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್​ ಸುಬ್ರಮಣಿಯನ್​, “ಸಾರ್ವತ್ರಿಕ ಮೂಲ ಆದಾಯ ನೀಡುವ ವಿಚಾರದ ಬಗ್ಗೆ  ಜಮ್ಮು-ಕಾಶ್ಮೀರ ಸರ್ಕಾರದ ಜೊತೆ ಚರ್ಚಿಸಿದ್ದೆವು. ಈ ಬಗ್ಗೆ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಜೊತೆಗೂ ಮಾತನಾಡಿದ್ದೇವೆ. ಅವರು ಇದನ್ನು ಜಾರಿಗೆ ತರಲು ಉತ್ಸುಕರಾಗಿದ್ದಾರೆ. ಇದನ್ನು ಜಾರಿ ಮಾಡುವಾಗ ಹೆಚ್ಚು ಜಾಗರೂಕರಾಗಿರಬೇಕು,” ಎನ್ನುತ್ತಾರೆ.

ಒಂದೊಮ್ಮೆ ಬಜೆಟ್​ನಲ್ಲಿ ಸಾರ್ವತ್ರಿಕ ಮೂಲ ಆದಾಯ ಘೋಷಣೆ ಮಾಡಿದರೆ, ಇದು ಕೇಂದ್ರ ಸರ್ಕಾರದ ಆಡಳಿತಕ್ಕೆ ಮೈಲೇಜ್​ ನೀಡಲಿದೆ ಎಂಬುದು ಕೆಲ ಬಿಜೆಪಿ ನಾಯಕರ ಅಭಿಪ್ರಾಯ. ಈಗಾಗಲೇ ಕೆನಡಾ ಹಾಗೂ ಸ್ವಿಟ್ಜರ್​ಲೆಂಡ್​ನಲ್ಲಿ ಈ ರೀತಿಯ ಪ್ರಯತ್ನ ನಡೆದಿದೆ. ಆದರೆ ನಮ್ಮ ದೇಶ ಸಾರ್ವತ್ರಿಕ ಮೂಲ ಆದಾಯ ನೀಡಲು ಸಿದ್ಧಗೊಂಡಿಲ್ಲ ಎಂಬುದು ಕೆಲ ತಜ್ಞರ ಅಭಿಪ್ರಾಯ.
ಏನಿದು ಸಾರ್ವತ್ರಿಕ ಮೂಲ ಆದಯ?:

ಈ ಯೋಜನೆ ಅಡಿಯಲ್ಲಿ ದೇಶದ ಎಲ್ಲ ನಾಗರಿಕರಿಗೆ ಇಂತಿಷ್ಟು ಎಂದು ಹಣ ನೀಡಲಾಗುತ್ತದೆ. ದೇಶದ ಎಲ್ಲ ಪ್ರಜೆಗಳಿಗೆ ಜೀವನ ನಡೆಸುವುದಕ್ಕೆ ಅಗತ್ಯ ಇರುವ ಕನಿಷ್ಟ ಹಣ ಒದಗಿಸುವುದು ಈ ಯೋಜನೆಯ ಉದ್ದೇಶ. ನಾಗರಿಕರಲ್ಲಿ ಸಮಾನತೆ ತರುವುದು ಮತ್ತು ಬಡತನ ನಿವಾರಿಸುವುದು ಯೋಜನೆಯ ಮೂಲ ಧ್ಯೇಯಗಳು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ