ಸಣ್ಣ ಮತ್ತು ಮಧ್ಯಮ ರೈತರಿಗೆ ವಾರ್ಷಿಕ 6೦೦೦ ರೂ ಹಣ

ನವದೆಹಲಿ, ಫೆ.1- ಕೃಷಿ ಸಾಲ ಮನ್ನಾ ಮಾಡಬೇಕು ಎಂಬ ಬಲವಾದ ಬೇಡಿಕೆಗೆ ಬದಲಾಗಿ ಕೇಂದ್ರ ಸರ್ಕಾರ ಸಣ್ಣ ಮತ್ತು ಮಧ್ಯಮ ರೈತರಿಗೆ ವಾರ್ಷಿಕ ಆರು ಸಾವಿರ ಹಣ ನೀಡುವ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ.

ಸಂಸತ್‍ನಲ್ಲಿಂದು ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ರಾಜ್ಯ ಸಚಿವ ಪಿಯೂಷ್ ಗೋಯಲ್ ಅವರು, ಪ್ರಧಾನಮಂತ್ರಿ ಕಿಸಾನ್ ಸಮ್ಮ್ಮಾನ್ ನಿಧಿಯನ್ನು ಸ್ಥಾಪಿಸಿ ಈ ಮೂಲಕ ಎರಡು ಹೆಕ್ಟೇರ್‍ಗಿಂತ ಕಡಿಮೆ ಭೂಮಿ ಹೊಂದಿರುವ ಸಣ್ಣ ಮತ್ತು ಮಧ್ಯಮ ರೈತರಿಗೆ ವರ್ಷಕ್ಕೆ ಆರು ಸಾವಿರ ನಗದನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದಾರೆ.

ಮೂರು ಕಂತುಗಳಲ್ಲಿ ಈ ಹಣ ವರ್ಗಾವಣೆಯಾಗಲಿದ್ದು, ಪ್ರತಿ ಕಂತಿನಲ್ಲಿ ಎರಡು ಸಾವಿರ ರೂ.ವನ್ನು ಪಾವತಿಸಲಾಗುವುದು. ಈ ಯೋಜನೆ ದೇಶದ 12 ಕೋಟಿ ರೈತರಿಗೆ ತಲುಪಲಿದ್ದು, ಸುಮಾರು 75 ಸಾವಿರ ಕೋಟಿ ರೂ. ವೆಚ್ಚವಾಗುವ ಅಂದಾಜು ಮಾಡಲಾಗಿದೆ ಎಂದರು.

ಈ ಯೋಜನೆಗೆ ಕೇಂದ್ರ ಸರ್ಕಾರವೇ ಸಂಪೂರ್ಣ ಹಣ ಭರಿಸುತ್ತಿದ್ದು, ಈ ಹಣಕಾಸು ವರ್ಷದಲ್ಲಿ 20ಸಾವಿರ ಕೋಟಿ ಖರ್ಚು ಮಾಡುವುದಾಗಿ ತಿಳಿಸಿದರು.
ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮೇಲೆ ಭಾರೀ ನಿರೀಕ್ಷೆ ಹೊಂದಿದ್ದ ರೈತ ಸಮುದಾಯಕ್ಕೆ ಪಿಯೂಷ್ ಗೋಯಲ್ ಕೊನೆಗೂ ನಿರಾಸೆ ಮಾಡಿಲ್ಲ. ಸಾಲ ಮನ್ನಾ ಮಾಡಲೇಬೇಕು ಎಂಬ ಬಲವಾದ ಒತ್ತಡದ ನಡುವೆಯೂ ರೈತರ ಆದಾಯ ಖಾತ್ರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಪರಿಚಯಿಸುವ ಮೂಲಕ ಮೂಗಿಗೆ ತುಪ್ಪ ಸವರಲಾಗಿದೆ.

ಬಜೆಟ್ ಭಾಷಣದಲ್ಲಿ ಮಾತನಾಡಿರುವ ಪಿಯೂಷ್ ಗೋಯಲ್ ಅವರು, ರೈತರು ತಮ್ಮ ಉತ್ಪಾದನೆಗೆ ತಕ್ಕಂತೆ ಆದಾಯ ಪಡೆಯುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಅವರ ಗಳಿಕೆಯಲ್ಲಿ ಹಿನ್ನಡೆಯಾಗಿದೆ. ಆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್‍ನಿಧಿ ಪರಿಚಯಿಸಲಾಗಿದೆ ಎಂದು ಅವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ