ನವದೆಹಲಿ, ಫೆ.1-ನೋಟು ಅಮಾನೀಕರಣದ ನಂತರ 1.30 ಲಕ್ಷ ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಸಂಸತ್ನಲ್ಲಿ ಮಧ್ಯಂತರ ಬಜೆಟ್ ಮಂಡನೆ ಮಾಡಿ ಮಾತನಾಡಿದ ಅವರು, ದೇಶಾದ್ಯಂತ 3.38 ಲಕ್ಷ ನಕಲಿ ಕಂಪೆನಿಗಳನ್ನು ಗುರುತಿಸಲಾಗಿದ್ದು, ಕಪ್ಪು ಹಣವನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗಿದೆ. ಆರ್ಥಿಕ ಅಪರಾಧಿಗಳನ್ನು ಶಿಕ್ಷಿಸುವ ಮತ್ತು ಬೇನಾಮಿ ಆಸ್ತಿ ವಿರುದ್ಧ ಕ್ರಮಕೈಗೊಳ್ಳುವ ಕಾಯ್ದೆಗಳನ್ನು ಜಾರಿಗೊಳಿಸಲಾಗಿದೆ.
ನೋಟು ಅಮಾನೀಕರಣ, ಕಪ್ಪು ಹಣದ ವಿರುದ್ಧ ಹೋರಾಟದಲ್ಲಿ ಮಹತ್ವದ ಹೆಜ್ಜೆಯಾಗಿದೆ. ಸುಮಾರು ಒಂದು ಕೋಟಿ ಜನ ತೆರಿಗೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಕಪ್ಪು ಹಣದ ವಿರುದ್ಧದ ಹೋರಾಟದಲ್ಲಿ ನಮ್ಮ ಬದ್ಧತೆ ಮುಂದುವರೆದಿದ್ದು, ನೋಟು ಅಮಾನೀಕರಣದ ಆಂದೋಲನ ಅದಕ್ಕೆ ಪೂರಕವಾಗಿದೆ ಎಂದಿದ್ದಾರೆ.
ಭಾರತ ಮುಂದಿನ ಐದು ವರ್ಷದಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಲಿದೆ. ಮುಂದಿನ ಎಂಟು ವರ್ಷದಲ್ಲಿ ಇದು 10 ಟ್ರಿಲಿಯನ್ ಡಾಲರ್ಗೆ ಹೆಚ್ಚಾಗುವ ಸಾಧ್ಯತೆ ಇದೆ ಅವರು ಹೇಳಿದ್ದಾರೆ.
ಪ್ರತಿ ಕುಟುಂಬವೂ ಸೂರು, ಆರೋಗ್ಯ ಮತ್ತು ಸ್ವಚ್ಛ ಪರಿಸರದಲ್ಲಿ ವಾಸಿಸಬೇಕು ಎಂಬುದು ಕೇಂದ್ರ ಸರ್ಕಾರದ ಗುರಿ ಎಂದು ಹೇಳಿದರು.
ಭಾರತ 2022ಕ್ಕೆ 75ನೇ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಲಿದ್ದು, ಮುಂದಿನ ಭವಿಷ್ಯ ಭಾರತವನ್ನು ಗಮನದಲ್ಲಿಟ್ಟುಕೊಂಡು ಮೋದಿ ವಿಷನ್-2030 ಎಂಬ ಯೋಜನೆ ರೂಪಿಸಿರುವುದಾಗಿ ಹೇಳಿದರು.