ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಮಧ್ಯಂತರ ಬಜೆಟ್ ಇಂದಿನಿಂದಲೇ ಶುರುವಾಗಲಿದೆ. ಕೇಂದ್ರದ ಕೊನೆಯ ಬಜೆಟ್ ಅಧಿವೇಶನ ಇದಾಗಿದ್ದು, ಫೆಬ್ರವರಿ 13 ರವರೆಗೂ ನಡೆಯಲಿದೆ. ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದೆ ಎಂದು ಸುದ್ದಿ ಹರಿದಾಡುತ್ತಿತ್ತು. ಇದಕ್ಕೆ ಖುದ್ದು ಕೇಂದ್ರ ಹಣಕಾಸು ಸಚಿವಾಲಯವೇ ಸ್ಪಷ್ಟನೆ ನೀಡಿದ್ದು, ಕೊನೆಯ ಮತ್ತು ಮಧ್ಯಂತರ ಬಿಜೆಟ್ ಎಂದು ಘೋಷಿಸಿದೆ. ಅಲ್ಲದೇ ಕೇಂದ್ರ ಹಣಕಾಸು ಖಾತೆಯ ಹೊಣೆ ಹೊತ್ತ ಪಿಯೂಷ್ ಗೋಯಲ್ ಈ ಬಜೆಟ್ ಮಂಡಿಸಲಿದ್ದಾರೆ. ಜತೆಗೆ ಕಡೆಯ ಬಜೆಟ್ ಎಂಬ ಕಾರಣಕ್ಕೆ ಜನಪ್ರಿಯ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಹೀಗಾಗಿ ಈ ಅಧಿವೇಶನ ಮಹತ್ವದ್ದಾಗಿದೆ.
ಕೇಂದ್ರ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುತ್ತಿದೆ ಎಂಬ ವದಂತಿ ಹರಿದಾಡುತ್ತಿತ್ತು. ಬಳಿಕ ಈ ಬೆನ್ನಲ್ಲೇ ಎಚ್ಚೆತ್ತ ಕೇಂದ್ರ ಹಣಕಾಸು ಸಚಿವಾಲಯ ಇದು “2019-20ನೇ ಸಾಲಿನ ಮಧ್ಯಾಂತರ ಬಜೆಟ್ ಎಂದು ಘೋಷಿಸಿತು. ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಪಿಯೂಷ್ ಗೋಯೆಲ್, ಫೆಬ್ರವರಿ 1 ರಂದು ಬಜೆಟ್ ಮಂಡಿಸುತ್ತಿರುವುದಾಗಿ ತಿಳಿಸಿದ್ದರು. ಸಂಸತ್ತಿನ ಬಜೆಟ್ ಅಧಿವೇಶನ ಜನವರಿ 31ರಿಂದ ಫೆಬ್ರವರಿ 13ರವರೆಗೆ ನಡೆಯಲಿದೆ. ಫೆಬ್ರವರಿ 1 ರಂದು ಆಯವ್ಯಯ ಮಂಡನೆಯಾಗಲಿದೆ ಎಂದು ಗೊಂದಲಕ್ಕೆ ತೆರೆ ಎಳೆದರು.
ಇನ್ನು ಇಂದಿನಿಂದ ಆರಂಭವಾಗುವ ಜಂಟಿ ಅಧಿವೇಶನವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಉದ್ಘಾಟಿಸಿ ಭಾಷಣ ಮಾಡಲಿದ್ದಾರೆ. ಈ ಮಧ್ಯಂತರ ಬಜೆಟ್ನಲ್ಲಿ ಮೋದಿ ಸರ್ಕಾರ ನೌಕರರಿಗೆ ಹೆಚ್ಚಿನ ಪರಿಹಾರ ನೀಡುವ ನಿರೀಕ್ಷೆಯಿದೆ. ಆದಾಯ ತೆರಿಗೆ ಮಿತಿ ದ್ವಿಗುಣಗೊಳ್ಳುವ ಬಗ್ಗೆ ನಿರೀಕ್ಷಿಸಲಾಗುತಿದೆ. ಅಸ್ತಿತ್ವದಲ್ಲಿರುವ ಆದಾಯ ತೆರಿಗೆ ಮಿತಿಯನ್ನು ಸರ್ಕಾರ 5 ಲಕ್ಷ ರೂ. ಗೆ ಅಧಿಕಗೊಳಿಸಬಹುದು ಎಂದು ಹೇಳಲಾಗುತ್ತಿದೆ.
ಪೂರ್ಣ ಪ್ರಮಾಣದ ಬಜೆಟ್: ಕೇಂದ್ರ ಸರ್ಕಾರದ ವಾರ್ಷಿಕ ಹಣಕಾಸು ಯೋಜನೆಯ ಮಾರ್ಗಸೂಚಿಯನ್ನೇ ಪೂರ್ಣ ಪ್ರಮಾಣದ ಬಜೆಟ್ ಎಂದು ಕರೆಯಲಾಗುತ್ತದೆ. ಇಲ್ಲಿ ಹೇಗೆ? ಯಾವ ಮೂಲದಿಂದ ಆದಾಯ ಬರುತ್ತದೆ?; ಅದನ್ನು ಯಾವ ಕ್ಷೇತ್ರಕ್ಕೆ ವಿನಿಯೋಗ ಮಾಡಬೇಕು ಎಂಬುದರ ಬಗ್ಗೆ ವಿವರಣೆ ನೀಡಲಾಗುತ್ತದೆ. ಅಲ್ಲದೇ ಹೊಸ ತೆರಿಗೆ ಪ್ರಸ್ತಾಪ, ನೂತನ ಯೋಜನೆಗಳ ಘೋಷಿಸಲಾಗುತ್ತದೆ.
ಮಧ್ಯಂತರ ಬಜೆಟ್: ಅವಧಿ ಪೂರೈಸುವ ಮುನ್ನ ಯಾವುದೇ ಸರ್ಕಾರವಾಗಿರಲಿ ಮುಂದಿನ ನಾಲ್ಕು ತಿಂಗಳ ಖರ್ಚು-ವೆಚ್ಚಗಳನ್ನು ನಿಭಾಯಿಸಲು ಸಂಸತ್ತಿನ ಅನುಮೋದನೆ ಪಡೆಯಬೇಕಾಗುತ್ತದೆ. ಅದರಲ್ಲಿ ಯಾವುದೇ ಹೊಸ ತೆರಿಗೆ ಮತ್ತು ಹೊಸ ಘೋಷಣೆಗಳನ್ನು ಪ್ರಕಟಿಸಲು ಅವಕಾಶ ಇಲ್ಲ. ವೇತನ ಪಾವತಿ ಸೇರಿದಂತೆ ಯಾವುದೇ ಯೋಜನೆಗಳಿಗೆ ನೀಡಲಾಗುವ ವೆಚ್ಚದ ಪ್ರಮಾಣ ಮುಂದುವರಿಸಲು ಸಂಸತ್ ಅನುಮತಿ ಅಗತ್ಯವಾಗಿರುತ್ತದೆ. ಇದುವೇ ಕೇಂದ್ರದ ಮಧ್ಯಂತರ ಬಜೆಟ್ ಆಗಿರುತ್ತದೆ.