ಮುಂಬೈ, ಜ.30- ವಾಹನಗಳ ತಯಾರಿಕೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರ ಆಂಡ್ ಮಹೀಂದ್ರ ಕಂಪೆನಿಯ ವಾಣಿಜ್ಯ ಉದ್ದೇಶಿತ ಫ್ಯೂರಿಯೊ ಟ್ರಕ್ ಮಾರುಕಟ್ಟೆಗೆ ಬಂದಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ವಾಣಿಜ್ಯ ವಾಹನಗಳಿಗೆ ನಮ್ಮ ಸಂಸ್ಥೆಯ ಪ್ಯೂರಿಯೋ ಟ್ರಕ್ ಅತಿ ಹೆಚ್ಚು ಆದಾಯ ತಂದು ಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯ ಆಟೋಮೋಟಿವ್ ವಿಭಾಗದ ಅಧ್ಯಕ್ಷ ರಾಜನ್ ವಧೇರಾ.
ವಾಣಿಜ್ಯ ನಗರಿಯಲ್ಲಿ ಪ್ಯೂರಿಯೋ ಟ್ರಕ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೂರು ವಿವಿಧ ಪ್ರಕಾರದ ಅಪ್ಲಿಕೇಶನ್ ಒಳಗೊಂಡಿರುವ ವಾಣಿಜ್ಯ ಉದ್ದೇಶಿತ ವಾಹನಗಳನ್ನು ಬಿಡುಗಡೆ ಮಾಡಲಾಗಿದ್ದು, ನಮ್ಮ ಟ್ರಕ್ ಹೆಚ್ಚು ಆದಾಯ ತಂದುಕೊಡದಿದ್ದರೆ ಲಾರಿ ವಾಪಸ್ಎಂಬ ಭರವಸೆ ನೀಡುತ್ತಿದ್ದೇವೆ ಎಂದರು.
ಇತರ ವಾಹನಗಳಿಗೆ ಹೋಲಿಸಿದರೆ ಶೇ.5ರಷ್ಟು ಕಡಿಮೆ ಇಂಧನ, ಹೆಚ್ಚು ಸಾಗಾಣಿಕೆ ಸಾಮಥ್ರ್ಯ, ಮೊದಲ ಐದು ವರ್ಷ ಅಥವಾ ಐದು ಲಕ್ಷ ಕಿ.ಮೀ.ವರೆಗೆ ಉಚಿತ ವಾಹನ ನಿರ್ವಹಣೆಯ ಹೊಣೆ ಕಂಪೆನಿ ವಹಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಇದು ಖಂಡಿತವಾಗಿಯೂ ಹೆಚ್ಚು ಆದಾಯ ತಂದು ಕೊಡಲಿದೆ ಎಂದು ತಿಳಿಸಿದರು.
ಕೆಂಪು, ಬಿಳಿ ಸೇರಿದಂತೆ ನಾಲ್ಕು ಬಣ್ಣಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. 12 ರಿಂದ 14 ಟನ್ ಸರಕು ಸಾಗಣೆ ಮಾಡಬಹುದಾಗಿದ್ದು, ಇದರ ಎಕ್ಸ್ ಷೋರೂಂ ಬೆಲೆ 17.45 ಲಕ್ಷದಿಂದ 18.10 ಲಕ್ಷ ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದರು.
ವ್ಯವಸ್ಥಾಪಕ ನಿರ್ದೇಶಕ ಡಾ.ಪವನ್ ಗೊಯಂಕ ಮಾತನಾಡಿ, ವಾಣಿಜ್ಯ ಉದ್ದೇಶಿತ ವಾಹನ ಕ್ಷೇತ್ರದಲ್ಲಿ ಲಾಭದ ಬಗ್ಗೆ ಈ ರೀತಿಯ ಖಾತ್ರಿ ನೀಡುತ್ತಿರುವ ಏಕೈಕ ಕಂಪೆನಿ ನಮ್ಮದಾಗಿದೆ. ಇದು ಗ್ರಾಹಕರ ಬಗ್ಗೆ ಮಹೀಂದ್ರ ಸಂಸ್ಥೆಗಿರುವ ಬದ್ಧತೆಯಾಗಿದೆ ಎಂದರು.
ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಿನೋದ್ ಸಹಾಯ್ ಮಾತನಾಡಿ, ಫ್ಯುರಿಯೊ ಟ್ರಕ್ ಲಾಭದಾಯಕ ಮಾತ್ರವಲ್ಲ. ಚಾಲಕ ಸ್ನೇಹಿ ಕೂಡ ಆಗಿದೆ. ಚಾಲಕರ ಕ್ಯಾಬಿನ್ನಲ್ಲಿ ಆರಾಮದಾಯಕವಾಗಿ ಮಲಗಲು ಎರಡು ಬೆಡ್, ರೇಡಿಯಲ್ ಟಯರ್ ಹೊಂದಿರುವ ಈ ವಾಹನ ಏಕಾಏಕಿ ಎದುರಾಗುವ ಗುಂಡಿ ಅಥವಾ ರಸ್ತೆ ಉಬ್ಬುಗಳಿಂದ ಅನೇಕ ಬಾರಿ ಚಾಲಕರ ತಲೆಗೆ ಪೆಟ್ಟು ಬಿದ್ದ ಪ್ರಕರಣಗಳೂ ಇವೆ. ಈ ಹಿನ್ನಲೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ಕ್ಯಾಬಿನ್ ಟಾಪ್ ಎತ್ತರಿಸಲಾಗಿದೆ ಎಂದು ಮಾಹಿತಿ ನೀಡಿದರು.
ಒಟ್ಟಾರೆ ನಮ್ಮ ಸಂಸ್ಥೆ ಬಿಡುಗಡೆ ಮಾಡಿರುವ ಪ್ಯುರಿಯೋ ಟ್ರಕ್ ದೇಶದ ಎಲ್ಲಾ ರಾಜ್ಯಗಳಿಗೂ ಹೊಂದಾಣಿಕೆಯಾಗಲಿದೆ ಎಂದು ಮಹೀಂದ್ರ ಸಂಸ್ಥೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದರು.