ಬಜೆಟ್‍ನಲ್ಲಿ ಬಡವರಿಗೆ ಕನಿಷ್ಠ ಆದಾಯ ಘೋಷಣೆ ಮಾಡುವುದೇ ಎನ್‍ಡಿಎ ಸರ್ಕಾರ…?

ನವದೆಹಲಿ, ಜ.30- ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರದ ಕೊನೆಯ ಬಜೆಟ್‍ನಲ್ಲಿ ಬಡವರಿಗೆ ಕನಿಷ್ಠ ಆದಾಯ ಘೋಷಣೆಯಾಗುವ ಸಾಧ್ಯತೆ ಬಹುತೇಕ ಖಚಿತವಾಗಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದಾಯ ಖಾತರಿ ಯೋಜನೆ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಈಗಾಗಲೇ ಪ್ರಕಟಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇದನ್ನು ಬಜೆಟ್‍ನಲ್ಲಿ ಘೋಷಿಸಲೇಬೇಕಾದ ಒತ್ತಡದಲ್ಲಿದೆ.

ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಡೆಯಾದ ನಂತರ ಎಚ್ಚೆತ್ತುಕೊಂಡಿರುವ ಪ್ರಧಾನಿ ಮೋದಿ ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಾರ್ವತ್ರಿಕ ಕನಿಷ್ಠ ಆದಾಯ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದ್ದಾರೆ.

2016-17ನೇ ಸಾಲಿನ ಆರ್ಥಿಕ ಸಮೀಕ್ಷೆ ಪ್ರಕಾರ, ಶೇ.75ರಷ್ಟು ಬಡವರಿಗೆ ಕನಿಷ್ಠ ಆದಾಯ ಖಾತ್ರಿ ನೀಡಬೇಕು. ಆದರೆ ಮೋದಿ ಸರ್ಕಾರ ಈ ಯೋಜನೆಗೆ ಹಣ ಹೇಗೆ ಹೊಂದಿಸುತ್ತದೆ ಎಂಬುದು ಈಗ ಬಹು ದೊಡ್ಡ ಪ್ರಶ್ನೆಯಾಗಿದೆ. ಈಗಾಗಲೇ ಆಹಾರ ಸಬ್ಸಿಡಿಗಾಗಿ 1 ಲಕ್ಷ 70 ಸಾವಿರ ಕೋಟಿ, ಎಂಎನ್ ಆರ್‍ಇಜಿಗೆ 55,000 ಕೋಟಿ ರೂಪಾಯಿ ನೀಡಲಾಗುತ್ತಿದ್ದು, ಹಣಕಾಸಿನ ಸಮತೋಲನ ಸಾಧಿಸಲು ಸಾಧ್ಯವೇ ಎಂದು ತಜ್ಞರು ಪ್ರಶ್ನಿಸುತ್ತಿದ್ದಾರೆ.

ಪ್ರತಿಯೊಬ್ಬ ವ್ಯಕ್ತಿಗೂ ಕನಿಷ್ಠ ಆದಾಯ ಕೊಡುವ ವ್ಯವಸ್ಥೆ ನಿರ್ಮಾಣ ಮಾಡುವುದು ಇದರ ಉದ್ದೇಶ. ಆದರೆ, ಅದಿನ್ನೂ ಕಾಗದದ ಮೇಲಿದೆಯೇ ಹೊರತು ಅನುಷ್ಠಾನಕ್ಕೆ ಬಂದಿಲ್ಲ. ಮೂಲಗಳ ಪ್ರಕಾರ, ಫೆ.1ರಂದು ನಡೆಯಲಿರುವ ಬಜೆಟ್‍ನಲ್ಲಿ ಮೋದಿ ಸರ್ಕಾರವು ಈ ಯೋಜನೆಯನ್ನು ಪ್ರಕಟಿಸುವ ನಿರೀಕ್ಷೆ ಇದೆ.

ಈ ಯೋಜನೆ ಅಡಿಯಲ್ಲಿ ದೇಶದ ಎಲ್ಲ ನಾಗರಿಕರಿಗೆ ಇಂತಿಷ್ಟು ಎಂದು ಹಣ ನೀಡಲಾಗುತ್ತದೆ. ದೇಶದ ಎಲ್ಲ ಪ್ರಜೆಗಳಿಗೆ ಜೀವನ ನಡೆಸುವುದಕ್ಕೆ ಅಗತ್ಯ ಇರುವ ಕನಿಷ್ಟ ಹಣ ಒದಗಿಸುವುದು ಈ ಯೋಜನೆಯ ಉದ್ದೇಶ. ನಾಗರಿಕರಲ್ಲಿ ಸಮಾನತೆ ತರುವುದು ಮತ್ತು ಬಡತನ ನಿವಾರಿಸುವುದು ಯೋಜನೆಯ ಮೂಲ ಉದ್ದೇಶ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ