ಗುವಾಹತಿ, ಜ.30-ಈಶಾನ್ಯ ರಾಜ್ಯ ಅಸ್ಸಾಂನಲ್ಲಿ 2008ರಲ್ಲಿ 88 ಜನರನ್ನು ಬಲಿ ತೆಗೆದುಕೊಂಡ ಸರಣಿ ಸ್ಫೋಟ ಪ್ರಕರಣದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್ಡಿಎಫ್ಬಿ) ಮುಖ್ಯಸ್ಥ ರಂಜನ್ ಡೈಮರಿ ಮತ್ತು ಇತರ 9 ಮಂದಿಗೆ ಸಿಬಿಐ ವಿಶೇಷ ನ್ಯಾಯಾಲಯ ಇಂದು ಜೀವಾವಧಿ ಶಿಕ್ಷೆ ವಿಧಿಸಿದೆ.
ದೋಷಿಗಳೆಂದು ಘೋಷಿಸಲ್ಪಟ್ಟ 14 ಆರೋಪಿಗಳಲ್ಲಿ ಮೂವರಿಗೆ ಕೋರ್ಟ್ ನಿಗದಿಗೊಳಿಸುವ ದಂಡ ಪಾವತಿ ನಂತರ ಬಿಡುಗಡೆ ಮಾಡಲು ಆದೇಶಿಸಲಾಗಿದೆ.
ಇನ್ನಿಬ್ಬರು ಈಗಾಗಲೇ ಜೀವಾವಧಿ ಶಿಕ್ಷೆ ಅವಧಿ ಪೂರ್ಣಗೊಳಿಸಿರುವುದರಿಂದ ಅವರ ಬಿಡುಗಡೆಗೆ ಆದೇಶ ನೀಡಲಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಧೀಶ ಅಪಾರೇಶ್ ಚಕ್ರವರ್ತಿ ಡೈಮರಿ ಮತ್ತು ಇತರ 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದರು.
ಈ ತೀರ್ಪಿನ ಹಿನ್ನೆಲೆಯಲ್ಲಿ ನ್ಯಾಯಾಲಯದ ಸುತ್ತಮುತ್ತಲ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಎನ್ಡಿಎಫ್ಬಿ ಪ್ರತ್ಯೇಕವಾದಿಗಳ ಸಂಘಟನೆ 30ನೇ ಅಕ್ಟೋಬರ್ 2008ರಲ್ಲಿ ಅಸ್ಸಾಂ ರಾಜಧಾನಿ ಗುವಾಹತಿ, ಕೊಕ್ರಾಜಾರ್, ಬಾಂಗೈಗಾಂವ್ ಮತ್ತು ಬಾರ್ಪೇಟಾಗಳಲ್ಲಿ ಸರಣಿ ಸ್ಫೋಟಗಳನ್ನು ನಡೆಸಿತ್ತು.
ಈ ವಿಧ್ವಂಸಕ ಕೃತ್ಯದಲ್ಲಿ 88 ಮಂದಿ ಹತರಾಗಿ ಅನೇಕರು ತೀವ್ರ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೊಂಡಿತ್ತು.