ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆ ಜಾರಿ: ರಾಹುಲ್ ಮತ್ತೊಂದು ಭರವಸೆ

ಕೊಚ್ಚಿ, ಜ.30- ಗ್ರಾಮೀಣ ಭಾಗದ ಜನರಿಗೆ ಕನಿಷ್ಠ ಆದಾಯ ಭದ್ರತೆಯ ಭರವಸೆ ನೀಡಿದ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲಾಗುವುದು ಎಂದು ಮತ್ತೊಂದು ಆಶ್ವಾಸನೆ ನೀಡಿದ್ದಾರೆ.

ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನಮತ ಗಳಿಸಲು ಕಸರತ್ತು ಮುಂದುವರೆಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ ಮೂರು ರಾಜ್ಯಗಳಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನರೇಂದ್ರ ಮೋದಿ ಕಳೆದ ಐದು ವರ್ಷಗಳಲ್ಲಿ ರೈತರ ವಿರುದ್ಧ ಮಾಡಿರುವ ಎಲ್ಲಾ ಅನ್ಯಾಯಗಳನ್ನು ಸರಿಪಡಿಸಲಾಗುವುದು ಎಂದರು.

ಮಹಿಳಾ ಬೂತ್ ಮಟ್ಟದ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಪ್ರತಿ ಚುನಾವಣೆಯಲ್ಲಿ ಹೆಚ್ಚಿನ ಯುವಕರು ಮತ್ತು ಮಹಿಳೆಯರು ಪಾಲ್ಗೊಳ್ಳಬೇಕು. ಮಹಿಳೆಯರು ನಾಯಕ ಸ್ಥಾನದಲ್ಲಿ ಇರುವುದನ್ನು ನೋಡ ಬಯಸುತ್ತೇವೆ. ಕೇರಳದ ನಾಯಕರು ಅತ್ಯಂತ ಸಮರ್ಥರು ಎಂಬುದು ನನಗೆ ಗೊತ್ತಿದೆ ಎಂದು ಹೇಳಿದರು.

ಸುಮಾರು 25 ಸಾವಿರ ಮಹಿಳಾ ಬೂತ್ ಮಟ್ಟದ ಅಧ್ಯಕ್ಷರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ನರೇಂದ್ರ ಮೋದಿ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಾ ಐದು ವರ್ಷ ಕಾಲ ಹರಣ ಮಾಡಿದ್ದಾರೆ. ಯುವಕರಿಗೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ತನ್ನ 15 ಸ್ನೇಹಿತರಿಗೆ ಕನಿಷ್ಠ ಆದಾಯದ ಭದ್ರತೆ ಸೌಲಭ್ಯ ಮಾಡಿಸಿಕೊಟ್ಟಿದ್ದಾರೆ. ನೀವುಗಳು ಕೂಡಾ ಅನಿಲ್ ಅಂಬಾನಿಯಾಗಿದ್ದರೆ ನಿಮಗೂ ಕನಿಷ್ಠ ಆದಾಯ ಭದ್ರತೆ ಸೌಲಭ್ಯ ಒದಗಿಸುತ್ತಿದ್ದರು ಎಂದು ರಾಹುಲ್ ಗಾಂಧಿ ಆರೋಪಿಸಿದರು.

ದೇಶದ ಎಲ್ಲಾ ಪ್ರಜೆಗಳಿಗೂ ಕನಿಷ್ಠ ಆದಾಯ ಭದ್ರತೆ ಒದಗಿಸಲು ಚಿಂತನೆ ನಡೆಸಿರುವುದಾಗಿ ರಾಹುಲ್ ಗಾಂಧಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ