ನವದೆಹಲಿ: ಏರ್ಸೆಲ್- ಮ್ಯಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ಇಡಿ ವಿಚಾರಣೆ ಎದುರಿಸುತ್ತಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬಂರಂ ಅವರು ವಿದೇಶಕ್ಕೆ ತೆರಳಬೇಕಾದರೆ ₹ 10 ಕೋಟಿ ಭದ್ರತಾ ಠೇವಣಿ ಇರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.
ಕಾರ್ತಿ ಚಿದಂಬಂರಂ ಅವರು, ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಇಂಗ್ಲೆಂಡ್, ಸ್ಪೇನ್, ಜರ್ಮನಿ ಹಾಗೂ ಫ್ರಾನ್ಸ್ನಲ್ಲಿ ನಡೆಯಲ್ಲಿರುವ ಟೆನ್ನಿಸ್ ಪಂದ್ಯಾವಳಿ ವೀಕ್ಷಿಸಲು ವಿದೇಶ ಪ್ರವಾಸಕ್ಕೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದ್ದರು.
ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರು, ವಿದೇಶಕ್ಕೆ ತೆರಳುವ ಮುನ್ನ ₹ 10 ಕೋಟಿ ಭದ್ರತಾ ಠೇವಣಿ ಇರಿಸುವಂತೆ ಸೂಚಿಸಿದರು. ‘ನೀವು ನಿಮಗೆ ಬೇಕಾದಲ್ಲೆಲ್ಲಾ ಹೋಗಬಹುದು. ನಿಮಗೆ ಬೇಕಾದನ್ನು ಮಾಡಬಹುದು. ಆದರೆ, ಕಾನೂನಿನೊಂದಿಗೆ ಆಟವಾಡ ಬೇಡಿ. ಅಸಹಕಾರ ಅಸಮರ್ಥನೀಯ ಆದರೆ ತೀರಾ ಕೆಳಗಿಳಿಯಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು, ಕಾರ್ತಿ ಚಿದಂಬರಂ ತನಿಖೆಗೆ ಸಹಕರಿಸುತ್ತಿಲ್ಲ. ವಿದೇಶ ಪ್ರವಾಸದ ನೆಪದಲ್ಲಿ ಪದೇಪದೆ ತಪ್ಪಿಸಿಕೊಳ್ಳುತ್ತಿದ್ದು, ಪ್ರಕರಣದ ವಿಚಾರಣೆ ಮತ್ತಷ್ಟು ವಿಳಂಬವಾಗುತ್ತಿದೆ ಎಂದು ಈ ಹಿಂದೆಯೇ ಕೋರ್ಟ್ ಮುಂದೆ ದೂರಿದ್ದರು.