ಕ್ಯಾರಕಾಸ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊಲಂಬಿಯಾದ ಸರ್ಕಾರಕ್ಕೆ ಮತ್ತು ಅಲ್ಲಿನ ಕೆಲ ಮಾಫಿಯಾಗಳಿಗೆ ನನ್ನನ್ನು ಹತ್ಯೆ ಮಾಡಲು ಸುಪಾರಿ ನೀಡಿದ್ದಾರೆ ಎಂದು ವೆನಿಜುವೆಲಾ ಅಧ್ಯಕ್ಷ ನಿಕೊಲೊಸ್ ಮ್ಯಾಡುರೊ ಆರೋಪ ಮಾಡಿದ್ದಾರೆ.
ನನ್ನ ಹತ್ಯೆಗೆ ಸಂಚು ನಡೆಯುತ್ತಿದೆ. ಒಂದು ವೇಳೆ ನನಗೇನಾದರೂ ಸಂಭವಿಸಿದರೆ. ಅದಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಮತ್ತು ಕೊಲಂಬಿಯಾದ ಅಧ್ಯಕ್ಷ ಇವಾನ್ ಮಾರ್ಕ್ವೆಜ್ ಅವರೇ ಹೊಣೆ ಎಂದು ಹೇಳಿದ್ದಾರೆ.
ವೆನಿಜುವೆಲಾದಲ್ಲಿ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ಹೇಳಿದ್ದ ಅಮೆರಿಕ, ನಿಕೊಲೊಸ್ ಮ್ಯಾಡುರೊ ಅವರು ಅಧ್ಯಕ್ಷ ಪದವಿಯಲ್ಲಿರುವಾಗಲೇ, ಅಲ್ಲಿನ ವಿರೋಧ ಪಕ್ಷದ ನಾಯಕ ಜುವಾನ್ ಗುಯಿಡೊ ಅವರನ್ನು ಅಧ್ಯಕ್ಷರನ್ನಾಗಿ ಘೋಷಣೆ ಮಾಡಿತ್ತು. ಈ ಮೂಲಕ ಮತ್ತೊಂದು ದೇಶದ ಆಡಳಿತದಲ್ಲಿ ಮೂಗು ತೂರಿಸಿತ್ತು.
ಅಲ್ಲದೇ ಹಿಂದೆ ನಿಕೊಲೊಸ್ ಮ್ಯಾಡುರೊ ಅವರು ಸಮಾರಂಭವೊಂದರಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅವರಿದ್ದ ವೇದಿಕೆಯ ಎದುರಿಗಿದ್ದ ಕಟ್ಟಡವೊಂದರಿಂದ ಭಾರಿ ಪ್ರಮಾಣದ ಸ್ಫೋಟದ ಸದ್ದು ಕೇಳಿ ಬಂದಿತ್ತು. ಇದನ್ನು ಮ್ಯಾಡುರೊ ತನ್ನ ಹತ್ಯೆಗೆ ನಡೆಸಿರುವ ಸಂಚು ಎಂದೇ ಹೇಳುತ್ತಿದ್ದಾರೆ. ಆದರೆ ಅದು ಹತ್ಯೆಯ ಸಂಚಾಗಿರಲಿಲ್ಲ ಎಂದು ತನಿಖೆಯಲ್ಲಿ ಸಾಬೀತಾಗಿತ್ತು.