ಹುತಾತ್ಮರ ದಿನಾಚರಣೆ ಹಿನ್ನಲೆ: ದೇಶಾದ್ಯಂತ ಬಾಪುವಿಗೆ ಶ್ರದ್ಧಾಂಜಲಿ

ನವದೆಹಲಿ, ಜ.30-ಇಂದು ಹುತಾತ್ಮರ ದಿನಾಚರಣೆ. ಜನವರಿ 30, 1948ರಂದು ರಾಷ್ಟ್ರಪಿತ ಮಹಾತ್ಮಗಾಂಧಿ ಹಂತಕನ ಗುಂಡಿಗೆ ಬಲಿಯಾದ ದಿನವನ್ನು ಹುತ್ಮಾತರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಪ್ರಯುಕ್ತ ಇಂದು ದೇಶಾದ್ಯಂತ ಬಾಪುವಿಗೆ ಶ್ರದ್ಧಾಂಜಲಿ ನಮನ ಸಲ್ಲಿಸಲಾಗುತ್ತಿದೆ.

ಹುತಾತ್ಮರ ದಿನದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯ ನಾಯ್ಡು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಮಂತ್ರಿಗಳಾದ ಎಚ್.ಡಿ.ದೇವೇಗೌಡರು, ಡಾ. ಮನಮೋಹನ್ ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಮಹಾತ್ಮ ಗಾಂಧಿ ಸೇರಿದಂತೆ ಅನೇಕರ ತ್ಯಾಗ-ಬಲಿದಾನವನ್ನು ಸ್ಮರಿಸಿದ್ದಾರೆ.

ಬಾಪು ಅವರ 71ನೇ ಪುಣ್ಯ ತಿಥಿ ಪ್ರಯುಕ್ತ ರಾಜಧಾನಿ ದೆಹಲಿಯಲ್ಲಿರುವ ಗಾಂಧಿ ಅವರ ಸಮಾಧಿ ಸ್ಥಳ ಸೇರಿದಂತೆ ದೇಶದ ವಿವಿಧೆಡೆ ಬಾಪುವಿನ ಸ್ಮರಣಾರ್ಥ ಪ್ರಾರ್ಥನೆ, ಭಜನೆ ಮತ್ತು ಇತರ ಕಾರ್ಯಕ್ರಮಗಳು ನಡೆದವು.

ಸ್ವತಂತ್ರ ಭಾರತದ ಪಾಲಿಗೆ 30ನೇ ಜನವರಿ 1948 ಕರಾಳ ದಿನ. ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ ದೊರಕಿಸಿಕೊಟ್ಟ ಬಾಪು ಹತ್ಯೆಗೀಡಾದರು. ಸತ್ಯ, ಅಹಿಂಸೆ ಮತ್ತು ಅಸಹಕಾರ ಚಳವಳಿಯಿಂದ ಜಗತ್ತಿನಾದ್ಯಂತ ಮಹಾತ್ಮ ಎಂದೇ ಚಿರಪರಿಚಿತರಾಗಿದ್ದ ಗಾಂಧಿ ಅವರನ್ನು ಹಿಂದೂ ರಾಷ್ಟ್ರೀಯವಾದ ಕಾರ್ಯಕರ್ತ ನಾಥುರಾಮ್ ಗೊಡ್ಸೆ ಗುಂಡಿಕ್ಕಿ ಹತ್ಯೆ ಮಾಡಿದ. ನವದೆಹಲಿಯ ಬಿರ್ಲಾ ಭವನದ ಮೈದಾನದಲ್ಲಿ ತಮ್ಮ ರಾತ್ರಿಯ ನಡಿಗೆಯಲ್ಲಿ ತೊಡಗಿದ್ದ ಬಾಪು ಅವರನ್ನು ಗೊಡ್ಸೆ ಕೊಂದು ಹಾಕಿದ. ಭಾರತದ ಮುಸಲ್ಮಾರ ಪರವಾಗಿ ಗಾಂಧಿ ತಾರತಮ್ಯ ಮಾಡುತ್ತಿದ್ದಾರೆ ಎಂಬುದು ಗೊಡ್ಸೆ ಆರೋಪವಾಗಿತ್ತು. 8ನೇ ನವೆಂಬರ್ 1949ರಲ್ಲಿ ಗೊಡ್ಸೆಯನ್ನು ನೇಣುಗಂಬಕ್ಕೆ ಏರಿಸಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ