ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ರೆಸಾರ್ಟ್‍ಗೆ ಕರೆದೊಯ್ಯಲು ಬಿಜೆಪಿ ಸಿದ್ಧತೆ

ಬೆಂಗಳೂರು,ಜ.30- ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಜೆಟ್ ಮಂಡನೆಗೆ ತಯಾರಿ ನಡೆಸುತ್ತಿರುವಾಗಲೇ ಇತ್ತ ಬಿಜೆಪಿ, ಕಾಂಗ್ರೆಸ್‍ನ ಅತೃಪ್ತ ಶಾಸಕರನ್ನು ರೆಸಾರ್ಟ್‍ಗೆ ಕರೆದೊಯ್ಯಲು ಸಿದ್ಧತೆ ನಡೆಸಿದೆ.

ಕಳೆದ ಬಾರಿ ಹರಿಯಾಣ ಸಮೀಪದ ಗುರುಗ್ರಾಮದ ಐಷರಾಮಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಹೂಡಿದ್ದ ಶಾಸಕರು ಈ ಬಾರಿ ದೂರದ ಒರಿಸ್ಸಾಗೆ ತೆರಳಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ರೆಸಾರ್ಟ್ ರಾಜಕಾರಣ ಆರಂಭವಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸಿವೆ.

ಈ ಬಾರಿ ಯಾವುದೇ ಕಾರಣಕ್ಕೂ ಆಪರೇಷನ್ ಕಮಲ ವಿಫಲವಾಗದಂತೆ ಎಚ್ಚರಿಕೆ ಹೆಜ್ಜೆ ಇಟ್ಟಿರುವ ಬಿಜೆಪಿ ದೋಸ್ತಿ ಪಕ್ಷಗಳಲ್ಲಿನ ಭಿನ್ನಮತವನ್ನು ಲಾಭ ಮಾಡಿಕೊಳ್ಳಲು ಹವಣಿಸುತ್ತಿರುವ ಕಮಲ ಪಕ್ಷ, ದೋಸ್ತಿ ಪಕ್ಷಕ್ಕೆ ಬಜೆಟ್ ಮಂಡಿಸಲು ಅವಕಾಶ ನೀಡಬಾರದು ಎಂಬ ಖಚಿತ ತೀರ್ಮಾನಕ್ಕೆ ಬಂದಿದೆ.

ಕಾಂಗ್ರೆಸ್‍ನ ಅತೃಪ್ತ ಶಾಸಕರು ಮತ್ತೆ ಬಿಜೆಪಿ ತೆಕ್ಕೆಗೆ ಸಿಕ್ಕಿದ್ದಾರೆ. ಹೀಗಾಗಿ ಅವರನ್ನು ಭುವನೇಶ್ವರ್ ರೆಸಾರ್ಟಿಗೆ ಶಿಫ್ಟ್ ಮಾಡಲು ಪ್ಲಾನ್ ಮಾಡಲಾಗಿದೆ. ಈ ನಿಟ್ಟಿನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜೊತೆ ಹಲವು ಶಾಸಕರು ಮುಂಬೈನಿಂದ ಭುವನೇಶ್ವರ ರೆಸಾರ್ಟಿಗೆ ಹಾರಲಿದ್ದಾರೆ. ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಕೂಡ ಮತ್ತೆ ಕ್ಷೇತ್ರದಿಂದ ನಾಪತ್ತೆಯಾಗಿದ್ದು ಇವರು ಭುವನೇಶ್ವರಗೆ ಹೋಗಲಿದ್ದಾರೆ ಎನ್ನಲಾಗಿದೆ.

ಸಂಕ್ರಾಂತಿ ಆಪರೇಷನ್ ವಿಫಲವಾಗಿದ್ದರಿಂದ ಬಿಜೆಪಿ ನಾಯಕರು ಮೌನ ಕ್ರಾಂತಿ ಆರಂಭಿಸಿ ಈ ಮೂಲಕ ಮಹಾರಾಷ್ಟ್ರ ಹಾಗೂ ಗುರುಗ್ರಾಮ ಕೈಬಿಟ್ಟು ಒಡಿಶಾ ರಾಜಧಾನಿ ಭುವನೇಶ್ವರನಲ್ಲಿ ಆಪರೇಷನ್ ನಡೆಸಲು ಮುಂದಾಗಿದೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ನಾಗೇಂದ್ರ ಕೂಡ ಕಳೆದ ಕೆಲವು ದಿನಗಳಿಂದ ಕಾಂಗ್ರೆಸ್ ನಾಯಕರ ಕೈಗೆ ಸಿಗುತ್ತಿಲ್ಲ. ಅಷ್ಟೇ ಅಲ್ಲದೆ ಸಿಎಲ್‍ಪಿ ಸಭೆಗೂ ಗೈರಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದರು. ಹೀಗಾಗಿ ನಾಗೇಂದ್ರ ಅವರು ಭುವನೇಶ್ವರ್ ರೆಸಾರ್ಟಿಗೆ ಹೋಗಲಿದ್ದಾರೆ ಎನ್ನಲಾಗಿದೆ. ಇತ್ತ ಕಂಪ್ಲಿ ಶಾಸಕ ಗಣೇಶ್ ಕೂಡ ಬಿಜೆಪಿ ಸೇರುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಆಪರೇಷನ್ ಭುವನೇಶ್ವರ ಮೂಲಕ ಫೆಬ್ರವರಿ 8ರಂದು ನಡೆಯುವ ಬಜೆಟ್ ಅಧಿವೇಶದ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಪ್ಲಾನ್ ಅನ್ನು ಬಿಜೆಪಿ ಸಿದ್ಧಪಡಿಸಿದೆ. ಅಷ್ಟೇ ಅಲ್ಲದೆ ಇದೇ ಅಂತಿಮ ಪ್ರಯತ್ನ. ಇದರಲ್ಲಿ ಯಶಸ್ವಿಯಾಗಬೇಕು ಎಂದು ಪಕ್ಷದ ನಾಯಕರು ಶಪಥ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಶಾಸಕ ಮಹೇಶ್ ಕುಮಟಳ್ಳಿ ಅವರು ಕಾಂಗ್ರೆಸ್ ಶಾಸಕಾಂಗ ಸಭೆಗೂ ಹಾಜರಾಗದೇ, ಕ್ಷೇತ್ರದ ಜನರಿಗೂ ಸಿಗದೆ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು.
ಬಳಿಕ ಆಪರೇಷನ್ ಕಮಲ ವಿಫಲವಾಗಿದ್ದರಿಂದ ನಾಲ್ಕು ದಿನಗಳ ಹಿಂದೆಯಷ್ಟೇ (ಜನವರಿ 25ರಂದು) ರಾತ್ರಿ ಅಥಣಿ ಪಟ್ಟಣದ ಅಬ್ದುಲ್ ಕಲಾಂ ಪದವಿ ಪೂರ್ವ ಕಾಲೇಜಿನಲ್ಲಿ ಕಾಣಿಸಿಕೊಂಡಿದ್ದರು. ಆಗ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಅವರು, ನನಗೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಮುಂಬೈಗೆ ತೆರಳಿದ್ದೆ ಎಂದು ತಿಳಿಸಿದ್ದರು.

ಮಹೇಶ್ ಕುಮಟಳ್ಳಿ ಅವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಶಾಸಕರು ಮುಂಬೈನಿಂದ ವಾಪಸ್ ಬಂದು, ಕೇವಲ ನಾಲ್ಕು ದಿನ ಕ್ಷೇತ್ರದಲ್ಲಿದ್ದು ಮತ್ತೆ ನಾಪತ್ತೆಯಾಗಿದ್ದಾರೆ. ಅವರ ಈ ನಡೆ ರಾಜಕೀಯ ವಲಯದಲ್ಲಿ ಹಾಗೂ ಕ್ಷೇತ್ರದ ಜನರ ಚರ್ಚೆಗೆ ಗ್ರಾಸವಾಗಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತೇನೆ. ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳಿದ್ದ ಮಹೇಶ್ ಕುಮಟಳ್ಳಿ ಮತ್ತೆ ಮಹಾರಾಷ್ಟ್ರಕ್ಕೆ ತೆರಳಿರುವುದು ಎಲ್ಲರಲ್ಲಿ ಕೂತುಹಲ ಕೆರಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ