ಸಿಸಿಬಿ ಪೊಲೀಸರಿಂದ ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರ ಬಂಧನ

ಬೆಂಗಳೂರು, ಜ.29- ಉದ್ಯೋಗ ಕೊಡಿಸುವ ನೆಪದಲ್ಲಿ ಹೊರರಾಜ್ಯದಿಂದ ಮಹಿಳೆಯರನ್ನು ಮಾನವ ಸಾಗಣೆ ಮಾಡಿಕೊಂಡು ಬಂದು ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಯ ಮಹೇಶ್ (38), ರಜಿತ್ (28) ಮತ್ತು ಚಾಮರಾಜನಗರ ತಾಲೂಕಿನ ಶಿವರಾಜು ಬಂಧಿತ ಆರೋಪಿಗಳಾಗಿದ್ದು, ಇವರಿಂದ 2000 ಹಣ, 6 ಮೊಬೈಲ್ ಮತ್ತು ಒಂದು ಕಾರು ವಶಪಡಿಸಿಕೊಂಡಿದ್ದಾರೆ.

ಹೊರರಾಜ್ಯದಿಂದ ಹುಡುಗಿಯರನ್ನು ಮಾನವ ಸಾಗಣೆ ಮಾಡಿಕೊಂಡು ಬಂದು ಕೋರಮಂಗಲ 6ನೆ ಬ್ಲಾಕ್‍ನಲ್ಲಿರುವ ಗೆಸ್ಟ್‍ಹೌಸ್‍ನ ಕೊಠಡಿಯಲ್ಲಿರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿ ಅಕ್ರಮವಾಗಿ ಹಣ ಸಂಪಾದಿಸಿಕೊಂಡು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಬಂದಿದೆ.

ಈ ಆಧಾರದ ಮೇಲೆ ಸಿಸಿಬಿ ಪೊಲೀಸರು ಸ್ಥಳದ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿ ಪಶ್ಚಿಮ ಬಂಗಾಳ ಹಾಗೂ ದೆಹಲಿ ಮೂಲದ ಯುವತಿಯರನ್ನು ರಕ್ಷಿಸಿದ್ದಾರೆ.

ಆರೋಪಿಗಳು ಸಂಘಟಿತ ರೀತಿಯಲ್ಲಿ ತಮ್ಮದೇ ಜಾಲ ಮಾಡಿಕೊಂಡು ಹೊರರಾಜ್ಯಗಳಿಂದ ಅಮಾಯಕ ಹೆಣ್ಣು ಮಕ್ಕಳನ್ನು ಮಾನವ ಸಾಗಣೆ ಮಾಡಿಕೊಂಡು ಬಂದು ಅವರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಗೆಸ್ಟ್‍ಹೌಸ್‍ನಲ್ಲಿ ಕರೆತಂದು ವೇಶ್ಯಾವಾಟಿಕೆಯಲ್ಲಿ ತೊಡಗಿಸಿ ಹಣ ಸಂಪಾದನೆ ಮಾಡುತ್ತಿದ್ದುದು ತನಿಖೆಯಿಂದ ತಿಳಿದುಬಂದಿದೆ.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ.ಆರೋಪಿಗಳ ವಿರುದ್ಧ ಕೋರಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್, ಉಪ ಪೊಲೀಸ್ ಆಯುಕ್ತ ಗಿರೀಶ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ಸಹಾಯಕ ಪೊಲೀಸ್ ಆಯುಕ್ತ ಮೋಹನ್‍ಕುಮಾರ್, ಇನ್ಸ್‍ಪೆಕ್ಟರ್ ನಾರಾಯಣಗೌಡ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ