
ಬೆಂಗಳೂರು, ಜ.29-ಕಾಯಕಯೋಗಿ, ತ್ರಿವಿಧ ದಾಸೋಹಿ, 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅಂಗೈಯಲ್ಲಿಟ್ಟುಕೊಂಡು ಅಕ್ಷರ, ಅನ್ನ, ಆಶ್ರಯ ನೀಡಿ ಪೋಷಿಸುತ್ತಿದ್ದ ತುಮಕೂರಿನ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಭಾರತರತ್ನ ನೀಡದೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ಈ ಸಂಬಂಧ ವ್ಯರ್ಥ ಪ್ರಲಾಪ ಮಾಡುತ್ತಿದ್ದಾರೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದರು.
ಕನ್ನಡ ಒಕ್ಕೂಟದ ಮುಖಂಡರಾದ ಸಾ.ರಾ.ಗೋವಿಂದ್ ಸೇರಿದಂತೆ ಇನ್ನಿತರರೊಂದಿಗೆ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಅತ್ಯಮೂಲ್ಯ ಸೇವೆ ಸಲ್ಲಿಸಿದ್ದ ಸಿದ್ದಗಂಗಾ ಶ್ರೀಗಳ ಸೇವೆ ಪರಿಗಣಿಸಿ ಭಾರತ ರತ್ನ ನೀಡದ ಕೇಂದ್ರ ಸರ್ಕಾರದ ಧೋರಣೆಯನ್ನು ಖಂಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರು ಮನ್ ಕೀ ಬಾತ್ ಸೇರಿದಂತೆ ಹಲವೆಡೆ ವ್ಯರ್ಥ ಪ್ರಲಾಪ ಭಾಷಣಗಳನ್ನು ಮಾಡುತ್ತಿದ್ದಾರೆ. ಇದರಿಂದ ಶ್ರೀಗಳ ಸೇವೆಗೆ ಗೌರವ ದೊರೆಯುವುದಿಲ್ಲ. ಅವರಿಗೆ ಭಾರತರತ್ನ ದೊರೆಯಬೇಕು ಎಂದು ಆಗ್ರಹಿಸಿದರು.
ಶ್ರೀಗಳ ಅಂತ್ಯಸಂಸ್ಕಾರಕ್ಕೆ ಪ್ರಧಾನಿಯವರು ಆಗಮಿಸಬೇಕಿತ್ತು. ಕನಿಷ್ಠ ಕೇಂದ್ರ ಗೃಹ ಸಚಿವರು, ಹಣಕಾಸು ಸಚಿವರು ಬರಬೇಕಿತ್ತು. ಭಾರತರತ್ನ ಪ್ರಶಸ್ತಿಗೆ ಭಕ್ತರಿಂದ ಒತ್ತಡ ಹೆಚ್ಚಾಗುತ್ತದೆ ಎಂಬ ಹಿನ್ನೆಲೆಯಲ್ಲೇ ಬಂದಿರಲಿಲ್ಲ ಎಂದು ಗಂಭೀರ ಆರೋಪ ಮಾಡಿದರು.
ಫೆ.10 ರಂದು ಸಿದ್ದಗಂಗಾ ಮಠದ ಬಳಿ ಇರುವ ರೈಲ್ವೆ ಕ್ರಾಸಿಂಗ್ ಬಳಿ ಸೇತುವೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ಒಕ್ಕೂಟದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಜಾರ್ಜ್ ಫರ್ನಾಂಡೀಸ್ ಅವರ ನಿಧನಕ್ಕೆ ಇದೇ ಸಂದರ್ಭದಲ್ಲಿ ಸಂತಾಪ ವ್ಯಕ್ತಪಡಿಸಿದ ವಾಟಾಳ್, ಅವರ ಕಾರ್ಯವೈಖರಿಯನ್ನು ಸ್ಮರಿಸಿದರು.
ರಾಜ್ಯ ಮತ್ತು ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿರುವ ಅವರ ಸ್ಮಾರಕವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು. ಲೋಹಿಯಾ ಅವರ ಸಿದ್ಧಾಂತಗಳನ್ನು ಅಳವಡಿಸಿಕೊಂಡು ರಾಜ್ಯದಲ್ಲಿ ಹುಟ್ಟಿ ಮುಂಬೈನಲ್ಲಿ ರಾಜಕೀಯ ನೆಲೆ ಕಂಡುಕೊಂಡು ದೇಶದ ರಕ್ಷಣಾ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡಿದ ಜಾರ್ಜ್ ಫರ್ನಾಂಡೀಸ್ ನನ್ನ ಆತ್ಮೀಯ ಸ್ನೇಹಿತರಾಗಿದ್ದರು.ಅವರ ನಿಧನದಿಂದ ಉಂಟಾದ ದುಃಖ ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ ನೀಡಲಿ ಎಂದು ಪ್ರಾರ್ಥಿಸಿದರು.