ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಂದ ಕನಿಷ್ಟ ವೇತನ ಜಾರಿಗೆ ಭರವಸೆ: ಇದು ಕ್ರಾಂತಿಕಾರಿ ಕಾರ್ಯಕ್ರಮ ದಿನೇಶ್ ಗುಂಡುರಾವ್

ಬೆಂಗಳೂರು, ಜ.29-ಕನಿಷ್ಠ ವೇತನ ಜಾರಿಗೆ ತರುವ ಭರವಸೆಯನ್ನು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ನೀಡಿದ್ದು, ಇದು ಕ್ರಾಂತಿಕಾರಿ ಕಾರ್ಯಕ್ರಮ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಇಂದಿಲ್ಲಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ಹಕ್ಕು ಕಾಯ್ದೆ, ಆಧಾರ್ ವ್ಯವಸ್ಥೆ ಯೋಜನೆಗಳನ್ನು ಯುಪಿಎ ಸರ್ಕಾರ ಜಾರಿಗೆ ತಂದಿತ್ತು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಯಾರೂ ಬಡತನದಿಂದ ಬಳಲುವಂತಾಗಬಾರದು. ಹಾಗಾಗಿ ಈ ರೀತಿಯ ಯೋಜನೆಯನ್ನು ಜಾರಿಗೊಳಿಸಲು ರಾಹುಲ್‍ಗಾಂಧಿಯವರು ಮುಂದಾಗಿದ್ದಾರೆ. ನರೇಂದ್ರ ಮೋದಿಯವರು ಈ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ. ಮೋದಿಯವರ ಆಡಳಿತದಲ್ಲಿ ಬಡತನ, ನಿರುದ್ಯೋಗ ಹೆಚ್ಚಾಗಿದೆ ಎಂದು ಹೇಳಿದರು.

ನಮ್ಮದು ಸುಳ್ಳು ಹೇಳಿಕೊಂಡು ಬರುವ ಪಕ್ಷವಲ್ಲ. ಕನಿಷ್ಠ ವೇತನ ಜಾರಿ ಒಂದು ದೊಡ್ಡ ಯೋಜನೆ. ಬಡತನದಿಂದ ಮುಕ್ತವಾಗಲು ಈ ಯೋಜನೆ ಬಹಳಷ್ಟು ಸಹಕಾರಿಯಾಗಲಿದೆ.ಇದನ್ನು ವಿರೋಧಿಸುವವರು ಬಹಳ ಜನ ಇದ್ದಾರೆ ಎಂದು ಹೇಳಿದರು.

ರಾಹುಲ್, ಪ್ರಿಯಾಂಕಾ ನಮ್ಮ ಪಕ್ಷದ ನಾಯಕರು. ಪ್ರಜಾಪ್ರಭುತ್ವದ ಮೇಲೆ ರಾಹುಲ್‍ಗಾಂಧಿಯವರಷ್ಟು ನಂಬಿಕೆ ಇಟ್ಟವರು ಯಾರೂ ಇಲ್ಲ. ಮೋದಿ, ಅಮಿತ್ ಷಾ ಒಡೋಮಸ್. ಓನ್ಲಿ ಮೋದಿ-ಷಾ ಈಗ ಎಲ್ಲರೂ ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ನಿನ್ನೆ ವರುಣಾ ಕ್ಷೇತ್ರದ ಸಭೆಯಲ್ಲಿ ನಡೆದ ಘಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸಿಟ್ಟಿನಲ್ಲಿ ಆ ರೀತಿ ಹೇಳಿದ್ದಾರೆ. ಬಿಜೆಪಿಯವರ ಥರ ನಮ್ಮ ನಾಯಕರು ಮಹಿಳೆಯರ ಬಗ್ಗೆ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದರು.

ನಮಗೆ ಕುಮಾರಸ್ವಾಮಿಯವರೇ ಮುಖ್ಯಮಂತ್ರಿ. ಯಾರು ಲಕ್ಷ್ಮಣರೇಖೆ ದಾಟದಂತೆ ನಮ್ಮ ಶಾಸಕರಿಗೆ ಸೂಚಿಸಿದ್ದೇವೆ. ಇನ್ನು ಈ ರೀತಿ ಯಾರಾದರೂ ವರ್ತಿಸಿದರೆ ಎಷ್ಟೇ ಪ್ರಭಾವಿಗಳಾಗಿದ್ದರೂ ಅವರ ವಿರುದ್ಧ ಶಿಸ್ತಿನ ಕ್ರಮಕೈಗೊಳ್ಳುತ್ತೇವೆ. ಚುನಾವಣೆ ನಂತರ ಸಿಎಂ ಬದಲಾವಣೆ ಪ್ರಶ್ನೆ ಇಲ್ಲ. ಹೈಕಮಾಂಡ್ ಆದೇಶದಂತೆ ನಡೆಯುವುದು ನಮ್ಮ ಪಕ್ಷದ ಸಿದ್ಧಾಂತ. ಬೇರೆ ಯಾವುದೇ ಹೇಳಿಕೆಗೆ ಮಾನ್ಯತೆ ಇಲ್ಲ ಎಂದು ದಿನೇಶ್‍ಗುಂಡೂರಾವ್ ಹೇಳಿದರು.

ಬಡತನ, ಕಷ್ಟದಲ್ಲಿರುವವರಿಗೆ ಸಹಾಯ, ಸಹಕಾರ ನೀಡುವ ಕೆಲಸವನ್ನು ಯುಪಿಎ ಸರ್ಕಾರ ಮಾಡಿತ್ತು. ನರೇಗಾ ಯೋಜನೆ ಮೂಲಕ ಕೆಲಸವಿಲ್ಲದವರಿಗೆ ಕೂಲಿ ನೀಡುವ ಯೋಜನೆ ಜಾರಿಗೆ ತರಲಾಗಿತ್ತು. ಅದಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮನ್ನಣೆ ಕೂಡ ದೊರೆತಿತ್ತು.ಇದರಿಂದ ಗ್ರಾಮೀಣ ಭಾಗದ ಜನರ ವೇತನ ಹೆಚ್ಚಳವಾಯಿತು. ಕಾರ್ಮಿಕರ ಬೇಡಿಕೆ ಕೂಡ ಹೆಚ್ಚಾಯಿತು.ಮೋದಿ ಸರ್ಕಾರದಲ್ಲಿ ಗ್ಲೋಬಲ್ ಹಂಗರ್ ಇಡೆಕ್ಸ್‍ನಲ್ಲಿ ಭಾರತ 61ನೇ ಸ್ಥಾನದಿಂದ 103 ಸ್ಥಾನಕ್ಕೆ ಹೋಗಿದೆ.ಬಾಂಗ್ಲಾ, ಶ್ರೀಲಂಕಾ, ನೇಪಾಳ ನಮಗಿಂತ ಮುಂದಿದೆ ಎಂದರು.

ಸರ್ಕಾರ ಅವಧಿ ಮುಗಿಯುವ ಹಂತದಲ್ಲಿ ಜನರನ್ನು ಖುಷಿ ಪಡಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಸೂಟುಬೂಟಿನ ಸರ್ಕಾರ ಇದಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ