ಬೆಂಗಳೂರು, ಜ.29-ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಇದೇ ಗೋಳು ಆಗಿದೆ. ಅವರ ಕೈ ಮೇಲಾಯಿತೆಂದು ಇವರು, ಇವರ ಕೈ ಮೇಲಾಯಿತೆಂದು ಅವರು ಪರಸ್ಪರ ಕಾಲೆಳೆಯುವುದು, ನಿಂದಿಸುವುದು ಕಳೆದ 8 ತಿಂಗಳಿನಿಂದ ಇದೇ ಆಗಿದೆ. ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಾಗುತ್ತಿವೆಯೇ ಇಲ್ಲವೇ ಎಂಬುದು ಅನುಮಾನವಾಗಿದೆ.
ಯಾವುದೇ ಒಂದು ಸಂವಿಧಾನಾತ್ಮಕ ಸರ್ಕಾರ ರಚನೆಯಾದಾಗ ರಾಜ್ಯದ ಜನ ಅಭಿವೃದ್ಧಿಯನ್ನು ನಿರೀಕ್ಷಿಸುತ್ತಾರೆ. ಹೊಸ ಸರ್ಕಾರ ಜಾರಿಗೆ ಬಂದಿದೆ. ಹೊಸ ಹೊಸ ಅಭಿವೃದ್ಧಿ ಕೆಲಸಗಳಾಗುತ್ತವೆ. ರಾಜ್ಯ ಹೊಸ ದಿಕ್ಕಿನತ್ತ ಸಾಗುತ್ತದೆ, ಹೊಸ ಆಲೋಚನೆಯತ್ತ ಮುನ್ನಡೆಯುತ್ತದೆ ಎಂದು ಆಲೋಚಿಸುತ್ತಾರೆ. ಆದರೆ ಸಮ್ಮಿಶ್ರ ಸರ್ಕಾರ ರಚನೆಯಾದಾಗಿನಿಂದ ಕಾಂಗ್ರೆಸ್- ಜೆಡಿಎಸ್ ನಡುವಿನ ಒಳಜಗಳಗಳೇ ವಿಜೃಂಭಿಸುತ್ತಿವೆ.
ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಜನಪ್ರತಿನಿಧಿಗಳು ಪರಿಹಾರ ಕಂಡುಕೊಳ್ಳಬೇಕು.ಜನರ ಮಧ್ಯೆ ಇದ್ದು , ಜನರ ಬವಣೆಗಳನ್ನು ನೀಗಿಸುವುದು ಜನಪ್ರತಿನಿಧಿಗಳ ಕರ್ತವ್ಯವಾಗಿರುತ್ತದೆ. ಅದು ಪ್ರಜಾಪ್ರಭುತ್ವದ ದ್ಯೋತಕವೂ ಹೌದು.ಎಷ್ಟೇ ಕೆಟ್ಟ ಜನಪ್ರತಿನಿಧಿಗಳಿದ್ದರೂ ಪ್ರಜಾಪ್ರಭುತ್ವದಲ್ಲಿ ಅಧಿಕಾರಿಗಳಿಗೆ ಹೆಚ್ಚಿನ ಅವಕಾಶ ಸಿಗಬಾರದು.ಏಕೆಂದರೆ ಜನಪ್ರತಿನಿಧಿಯನ್ನು ಬದಲಾಯಿಸಲು ಅಧಿಕಾರವಿರುತ್ತದೆ.ಅಧಿಕಾರಿಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಶಾಸಕಾಂಗಕ್ಕಿಂತಲೂ ಕಾರ್ಯಾಂಗದ ಕೈ ಮೇಲಾದಂತಾಗಿದೆ. ಜನಪ್ರತಿನಿಧಿಗಳ ಕಿತ್ತಾಟದಿಂದ ಅಧಿಕಾರಿಗಳು ಮನಸೋ ಇಚ್ಛೆ ಆಡಳಿತ ನಡೆಸುತ್ತಿದ್ದಾರೇನೋ ಎಂದೆನಿಸುತ್ತಿದೆ.
ರಾಜಕಾರಣಿಗಳ ನಡುವೆ ಪ್ರತಿಷ್ಠೆಗಳೇ ಪ್ರಧಾನವಾಗುತ್ತಿವೆ. ಅಧಿಕಾರ ಪಡೆಯುವಲ್ಲೇ ಎರಡೂ ಪಕ್ಷಗಳ ಮುಖಂಡರು ಹರಸಾಹಸ ಪಡುತ್ತಿದ್ದಾರೆ. ಪರಸ್ಪರ ಕೆಸರೆರಚಾಟ ನಡೆಸುವಲ್ಲೇ ಕಾಲಹರಣವಾಗುತ್ತಿದೆ.ಪ್ರಜಾಪ್ರಭುತ್ವದ ನೀತಿ-ನಿಯಮಗಳೆಲ್ಲ ಮೂಲೆಗುಂಪಾಗಿವೆ.
ಸರ್ಕಾರ ರಚನೆಯಾದ 8 ತಿಂಗಳಲ್ಲೇ ರೆಸಾರ್ಟ್ ರಾಜಕಾರಣ ಮುನ್ನೆಲೆಗೆ ಬಂದು ಅಭಿವೃದ್ಧಿ ಎನ್ನುವುದು ಗಗನಕುಸುಮ ಎನ್ನುವಂತಾಯಿತು. ನಮ್ಮ ಕ್ಷೇತ್ರಕ್ಕೆ ನೀರಿಲ್ಲ, ಸೂರಿಲ್ಲ, ರಸ್ತೆಯಿಲ್ಲ, ಡಾಂಬರೀಕರಣವಾಗಿಲ್ಲ, ಸೇತುವೆ ಇಲ್ಲ ಎಂದು ಹೇಳಬೇಕಾಗಿದ್ದ ಕ್ಷೇತ್ರದ ಜನತೆ ನಮ್ಮ ಕ್ಷೇತ್ರಕ್ಕೆ ಶಾಸಕರು ಬಂದಿಲ್ಲ, ನಮ್ಮ ಕ್ಷೇತ್ರದ ಶಾಸಕರು ಕಾಣುತ್ತಿಲ್ಲ. ನಮ್ಮ ಕ್ಷೇತ್ರದ ಶಾಸಕರು ಒದೆ ತಿಂದು ಆಸ್ಪತ್ರೆಯಲ್ಲಿ ಮಲಗಿದ್ದಾರೆ, ನಮ್ಮ ಕ್ಷೇತ್ರದ ಶಾಸಕರು ಪೆÇಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ, ನಮ್ಮ ಶಾಸಕರು ಮುಂಬೈ ಹೊಟೇಲ್ನಲ್ಲಿದ್ದಾರೆ, ನಮ್ಮ ಕ್ಷೇತ್ರದ ಶಾಸಕರು ಹಲವು ದಿನಗಳಿಂದ ರೆಸಾರ್ಟ್ನಲ್ಲಿದ್ದಾರೆ. ನಮ್ಮ ಶಾಸಕರನ್ನು ಹುಡುಕಿ ಕೊಡಿ ಎಂದು ಹಲವು ಕಡೆ ದೂರು ನೀಡಿರುವುದು ಪ್ರಜಾಪ್ರಭುತ್ವದ ಅಣಕವಾಗಿದೆ.ಈ ಪರಿಸ್ಥಿತಿಗೆ ರಾಜ್ಯ ರಾಜಕಾರಣ ಬಂದು ನಿಂತಿದೆ.
ಸರ್ಕಾರ ರಚನೆಯಾದಾಗ ಆರಂಭ ಶೂರತ್ವ ಎನ್ನುವಂತಾದರೂ ಅಭಿವೃದ್ಧಿ ಕೆಲಸಗಳಿಗೆ ಶಂಕು ಸ್ಥಾಪನೆಯನ್ನಾದರೂ ಮಾಡಬೇಕಿತ್ತು. ಆದರೆ ಅಧಿಕಾರಕ್ಕಾಗಿ ಕಚ್ಚಾಡುವುದೇ ಆಗಿದೆ.ಅಧಿಕಾರ ಸಿಗಲಿಲ್ಲವೆಂದು ಗುಂಪುಗಳು, ಬಣಗಳು ಹೋರಾಟ ನಡೆಸುತ್ತಿದ್ದಾರೆ.ಅನುದಾನ ಪಡೆಯಲು ಕೆಲ ಶಾಸಕರು ಬ್ಲಾಕ್ಮೇಲ್ ರಾಜಕಾರಣಕ್ಕೆ ಇಳಿದಿದ್ದಾರೆ.
ಆಡಳಿತ ನಡೆಸುವವರದು ಒಂದು ರೀತಿಯಾದರೆ, ಬೆಂಬಲ ನೀಡಿರುವವರದು ಮತ್ತೊಂದು ರೀತಿಯಾಗಿದೆ. 37 ಶಾಸಕರಿರುವ ಪಕ್ಷದವರನ್ನು ಮುಖ್ಯಮಂತ್ರಿ ಮಾಡಿದ್ದೇವೆ. 79 ಶಾಸಕರಿರುವ ಪಕ್ಷ ಕೈಕಟ್ಟಿ ಕೂರಬೇಕೇ? ಎಂಬ ಒಳಬೇಗುದಿಯಲ್ಲಿ ಬಹಿರಂಗ ವೇದಿಕೆಯಲ್ಲಿ ಪರೋಕ್ಷವಾಗಿ ಜೆಡಿಎಸ್ ಪಕ್ಷದ ನಾಯಕರ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ.
ನಾವೇನು ಮನೆ ಬಾಗಿಲಿಗೆ ಬಂದಿರಲಿಲ್ಲ. ನೀವೆ ಮನೆ ಬಾಗಿಲಿಗೆ ಬಂದಿದ್ದು.ಬೇಷರತ್ ಬೆಂಬಲ ಎಂದು ಹೇಳಿ ಹೆಜ್ಜೆ ಹೆಜ್ಜೆಗೂ ಕಂಡೀಷನ್ ಹಾಕುತ್ತಿರುವುದು.ಇದು ಯಾವ ಸೀಮೆ ಮೈತ್ರಿ?ಬಿಜೆಪಿ ಜೊತೆ ಇದ್ದಾಗಲೇ ಸಂಬಂಧ ಚೆನ್ನಾಗಿತ್ತು ಎಂದು ಜೆಡಿಎಸ್ನವರು ಹೇಳುತ್ತಿದ್ದಾರೆ. ಮತ್ತೊಂದೆಡೆ ಅಧಿಕಾರ ಹಿಡಿಯಲು, ಅನುದಾನ ಪಡೆಯಲು ಹಲವು ಶಾಸಕರು ಬ್ಲ್ಯಾಕ್ಮೇಲ್ ತಂತ್ರ ಅನುಸರಿಸುತ್ತಿದ್ದರೆ, ಕಾಂಗ್ರೆಸ್-ಜೆಡಿಎಸ್ನಿಂದ ಸೋತವರು ಪ್ರತಿದಿನ ಒಂದೊಂದು ತಂತ್ರವನ್ನು ಅನುಸರಿಸುತ್ತಿದ್ದಾರೆ. ಈ ಎಲ್ಲದರ ನಡುವೆ ಪ್ರತಿದಿನ ಕಾಂಗ್ರೆಸ್-ಜೆಡಿಎಸ್ ನಡುವಿನ ಮೈತ್ರಿ ಸಡಿಲವಾಗುತ್ತಾ ಹೋಗುತ್ತಿದೆ.ಕಾಂಗ್ರೆಸ್ನ ಬಹುತೇಕ ಶಾಸಕರು ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಪ್ರತಿಪಕ್ಷ ಬಿಜೆಪಿ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡಿದ್ದಾರೆ. ಉಳಿದ ಜಿಲ್ಲೆಗಳನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಆಡಳಿತ ಪಕ್ಷದ ಭಾಗವಾಗಿರುವ ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಬಹಿರಂಗವಾಗಿಯೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಕಳೆದ ಏಳು ತಿಂಗಳಿನಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ.ಅನುದಾನ ಬಿಡುಗಡೆಯಾಗಿಲ್ಲ ಎಂದು ಹಲವರು ಆರೋಪ ಮಾಡಿದ್ದಾರೆ.
ಅಲ್ಲದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೇ ಗುಣಗಾನ ಮಾಡುತ್ತಲೇ ಬಂದಿದ್ದಾರೆ. ಹಾಲಿ ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿಯನ್ನು , ಸರ್ಕಾರದ ಕಾರ್ಯಕ್ರಮಗಳನ್ನು ಯಾರೂ ಸಮರ್ಥಿಸುತ್ತಿಲ್ಲ. ಅದರಲ್ಲೂ ಕಾಂಗ್ರೆಸ್ ಶಾಸಕರು ಕುಮಾರಸ್ವಾಮಿ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಚುರಪಡಿಸುತ್ತಿಲ್ಲ. ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾರ್ಯಕ್ರಮದ ಯೋಜನೆಗಳನ್ನೇ ಬಿಂಬಿಸುತ್ತಿದ್ದಾರೆ. ಸಹಜವಾಗಿಯೇ ಈ ಅಂಶ ಕುಮಾರಸ್ವಾಮಿಯವರನ್ನು ಕೆರಳಿಸಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿದ ಹೇಳಿಕೆ ಮೈತ್ರಿಯಲ್ಲಿ ತಲ್ಲಣ ಮೂಡಿಸಿತ್ತು.ನಂತರ ತೇಪೆ ಹಚ್ಚುವ ಕೆಲಸ ನಡೆಯಿತು.
ಮೈತ್ರಿಯ ಈ ಎಡವಟ್ಟುಗಳು ಲೋಕಸಭೆ ಚುನಾವಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಒಂದೇ ಉದ್ದೇಶದಿಂದ ಜೆಡಿಎಸ್ ಜೊತೆ ಕೈ ಜೋಡಿಸಿ ಸರ್ಕಾರ ರಚನೆ ಮಾಡಲಾಗಿತ್ತು. ಆದರೆ ನಂತರ ನಡೆದ ಬೆಳವಣಿಗೆಗಳಿಂದ ಸಾಕಷ್ಟು ಇರಿಸುಮುರಿಸು ಉಂಟಾಗಿತ್ತು.
ಲೋಕಸಭೆ ಚುನಾವಣೆಯವರೆಗೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆಯುತ್ತದೆಯೇ ಎಂಬ ಅನುಮಾನ ಹಲವಾರು ಬಾರಿ ಉಂಟಾಗಿತ್ತು. ಸಂಪುಟ ಪುನಾರಚನೆ, ನಿಗಮಮಂಡಳಿ ನೇಮಕ ಸಂದರ್ಭದಲ್ಲಿ ಉಂಟಾದ ಗೊಂದಲ ಇನ್ನೂ ಬಗೆಹರಿದಿಲ್ಲ.
ಈ ಅಸಮಾಧಾನದ ಪರಿಸ್ಥಿತಿ ಲಾಭ ಪಡೆದು ಸರ್ಕಾರ ರಚನೆ ಮಾಡಲು ಬಿಜೆಪಿ ನಡೆಸಿದ ರೆಸಾರ್ಟ್ರಾಜಕಾರಣದ ಬಿಸಿ ಇನ್ನೂ ಆರಿಲ್ಲ. ಈ ನಡುವೆ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆದಿವೆ. ಬಿಜೆಪಿಯ ಆಪರೇಷನ್ ಕಮಲ ಠುಸ್ ಆಯಿತು ಎನ್ನುವಾಗಲೇ ಕಾಂಗ್ರೆಸ್-ಜೆಡಿಎಸ್ ನಡುವಿನ ಒಳಜಗಳ ಮತ್ತಷ್ಟು ಉಲ್ಬಣಗೊಂಡಿದೆ.
ಬಿಜೆಪಿ ಆಪರೇಷನ್ ಕಮಲ ಕೈಬಿಟ್ಟರೂ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಪ್ರತಿಷ್ಠೆಯ ಜಗಳಗಳು ನಿಂತಿಲ್ಲ. ಪ್ರತಿದಿನ ಒಂದಲ್ಲ ಒಂದು ಕಾರಣದಿಂದ ನಡೆಯುತ್ತಲೇ ಇವೆ.
ಮುಖ್ಯಮಂತ್ರಿಯವರ ಕಾರ್ಯವೈಖರಿ ಕಾಂಗ್ರೆಸ್ನವರಿಗೆ ಇಷ್ಟವಾಗುತ್ತಿಲ್ಲ. ಕಾಂಗ್ರೆಸ್ನವರ ಧೋರಣೆ ಕುಮಾರಸ್ವಾಮಿಯವರಿಗೆ ಒಪ್ಪಿಗೆಯಾಗುತ್ತಿಲ್ಲ. ಇಷ್ಟ-ಕಷ್ಟಗಳ ನಡುವೆ ಸರ್ಕಾರ ಮುಂದೆ ಹೋಗುತ್ತಿದೆ.ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಸಾಗುತ್ತಿಲ್ಲ. ಆಗಿರುವ ಕೆಲಸಗಳು ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಮೂರ್ನಾಲ್ಕುತಿಂಗಳು ಸಹಿಸಿಕೊಳ್ಳಿ ಎಂದು ಎರಡೂ ಪಕ್ಷಗಳ ಮುಖಂಡರು ಹೇಳುತ್ತಿದ್ದಾರೆ.ಮುಂದೇನಾಗುತ್ತದೆಯೋ ಕಾದು ನೋಡಬೇಕು.
ಯಾವುದೇ ಜನಾದೇಶವಾಗಲಿ ಅದು ಒಂದೇ ಪಕ್ಷದ ಪರವಾಗಿರಬೇಕು. ಹಾಗಿದ್ದಾಗ ಮಾತ್ರ ಸ್ಥಿರ ಆಡಳಿತ ನೀಡಲು ಸಾಧ್ಯವಾಗುತ್ತದೆ. ಮತಾದೇಶ ಅತಂತ್ರದಿಂದ ರಚನೆಯಾಗುವ ಮೈತ್ರಿ ಸರ್ಕಾರಗಳು ಸಂಪೂರ್ಣ ಆಡಳಿತಾವಧಿ ಮುಗಿಸಿರುವ ಉದಾಹರಣೆಗಳು ತೀರಾ ಕಡಿಮೆ.