
ಬೆಂಗಳೂರು, ಜ.29- ಬಿಬಿಎಂಪಿ ಸಭೆಯಲ್ಲಿಂದು ತುಮಕೂರಿನ ಶತಾಯುಷಿ, ತ್ರಿವಿಧ ದಾಸೋಹಿ ಸಿದ್ಧಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಬಿಬಿಎಂಪಿ ಮಾಸಿಕ ಸಭೆಯಲ್ಲಿ ಲಿಂಗೈಕ್ಯರಾದ ಶ್ರೀಗಳ ಗುಣಗಾನ ಮಾಡಲಾಯಿತು.ಅಲ್ಲದೆ 10 ಸಾವಿರ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಪಕ್ಷಾತೀತವಾಗಿ ಒತ್ತಾಯಿಸಲಾಯಿತು.
ಆರಂಭದಲ್ಲಿ ಮಾತನಾಡಿದ ಆಡಳಿತ ಪಕ್ಷದ ನಾಯಕ ಎಂ.ಶಿವರಾಜ್, ಕಳೆದ ಸಭೆಯಲ್ಲಿ ತುಮಕೂರು ರಸ್ತೆಗೆ ಶ್ರೀಗಳ ಹೆಸರನ್ನು ಇಡಲಾಗಿದೆ. ಸ್ವಾಮೀಜಿಯ ಜಯಂತ್ಯೋತ್ಸವಕ್ಕೆ ಒಂದು ಕೋಟಿ ಮೀಸಲಿಡುವುದಾಗಿ ಹೇಳಿದರು.
ಅಕ್ಷರ, ಅನ್ನ, ವಸತಿ ನೀಡಿದ ತ್ರಿವಿಧ ದಾಸೋಹಿ ಲಿಂಗೈಕ್ಯರಾಗಿದ್ದು, ಈ ನೋವು ತಡೆಯುವ ಶಕ್ತಿಯನ್ನು ಅಲ್ಲಿನ ಮಕ್ಕಳಿಗೆ ಆ ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದರು.ಕೇಂದ್ರ ರಕ್ಷಣಾ ಸಚಿವರಾಗಿದ್ದ ಜಾರ್ಜ್ ಫರ್ನಾಂಡಿಸ್ ಅವರ ಕಾರ್ಯವೈಖರಿಯನ್ನು ಅವರು ಪ್ರಶಂಸಿಸಿದರು.
ಜೆಡಿಎಸ್ ಪಕ್ಷದ ನಾಯಕಿ ನೇತ್ರಾ ನಾರಾಯಣ್ ಮಾತನಾಡಿ, ಶ್ರೀಗಳ ಸೇವೆ ಅತ್ಯಮೂಲ್ಯವಾಗಿದ್ದು, ಅವರು ಬದುಕಿದ್ದಾಗಲೇ ಭಾರತ ರತ್ನ ನೀಡಬೇಕಿತ್ತು.
ಇನ್ನಾದರೂ ಅವರ ಸೇವೆಗೆ ಮರಣೋತ್ತರ ಭಾರತ ರತ್ನ ನೀಡಲಿ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಮುಂಬರುವ ಪಾಲಿಕೆ ಬಜೆಟ್‍ನಲ್ಲಿ ಯಾವುದಾದರೂ ಕಾಮಗಾರಿಗೆ ಶ್ರೀಗಳ ಹೆಸರಿಡುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.