ಬೆಂಗಳೂರು, ಜ.29-ರಾಜ್ಯಸರ್ಕಾರ ಯುವ ವಕೀಲರಿಗೆ ನೀಡುತ್ತಿರುವ 2 ಸಾವಿರ ರೂ.ಗಳ ಮಾಸಿಕ ಪ್ರೋತಾಸ ಧನವನ್ನು 5 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಎಂದು ವಕೀಲರ ಸಂಘ ಆಗ್ರಹಿಸಿದೆ.
ಈ ಸಂಬಂಧ ಕಳೆದ ವಾರ ನಡೆದ ವಕೀಲರ ಸಂಘದ ಸಭೆಯಲ್ಲಿ ಹಲವು ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಬಜೆಟ್ನಲ್ಲಿ ಅಳವಡಿಸಬೇಕೆಂದು ಮನವಿ ಮಾಡಿದೆ.
ಪ್ರಸ್ತುತ ಕರ್ನಾಟಕ ರಾಜ್ಯ ವಕೀಲ ಪರಿಷತ್ನಿಂದ ನೀಡುತ್ತಿರುವ ಕಲ್ಯಾಣ ನಿಧಿ ಅವೈಜ್ಞಾನಿಕವಾಗಿದ್ದು, ನಿಧನ ಹೊಂದಿದ ಎಲ್ಲ ವಕೀಲರಿಗೂ ಸಮನಾಗಿ 30 ಲಕ್ಷ ರೂ.ಗಳನ್ನು ನೀಡಬೇಕೆಂದು, ಕಲ್ಯಾಣ ನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಒತ್ತಾಯಿಸಿದೆ.
ರಾಜ್ಯ ಸರ್ಕಾರ ಬೆಂಗಳೂರು ವಕೀಲರ ಸಂಘಕ್ಕೆ ಒಂದು ಕೋಟಿ ರೂ. ಅನುದಾನ ನೀಡಬೇಕೆಂದು ಆಗ್ರಹಿಸಿದೆ.ವಕೀಲ ವೃತ್ತಿಯಲ್ಲಿ ನಿರತರಾಗಿರುವ ಎಲ್ಲ ವಕೀಲರುಗಳಿಗೆ ಸರ್ಕಾರದಿಂದ ವಿಮಾ ಸೌಲಭ್ಯ ನೀಡಬೇಕೆಂದು ಮತ್ತು ಅಡ್ವೊಕೇಟ್ ಅಕಾಡೆಮಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಒಂದು ಕೋಟಿ ರೂ.ಮಂಜೂರು ಮಾಡಬೇಕು.ವಕೀಲರ ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗಳೂರು ವಕೀಲರ ಸಂಘದ ಸಹಯೋಗದೊಂದಿಗೆ ನಡೆಸುತ್ತಿರುವ ಬೆಂಗಳೂರು ಪ್ರೊಫೆಷನಲ್ ಬೆನಿ ವೋಲೆಂಟ್ ಫಂಡ್ ಟ್ರಸ್ಟ್ಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 2 ಕೋಟಿ ರೂ.ಗಳ ಶಾಶ್ವತ ಪರಿಹಾರ ಮಂಜೂರು ಮಾಡಬೇಕೆಂದು ಮನವಿ ಮಾಡಿದೆ.
ಈ ಎಲ್ಲ ಅಂಶಗಳನ್ನು ಮುಂಬರುವ ಬಜೆಟ್ನಲ್ಲಿ ಅಳವಡಿಸಬೇಕೆಂದು ಸಂಘದ ಅಧ್ಯಕ್ಷ ಎ.ಕೆ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಗಂಗಾಧರಯ್ಯ ಅವರು ಕಾನೂನು ಮತ್ತು ಸಂಸದೀಯ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ.