ಬೆಂಗಳೂರು, ಜ.29-ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‍ನಿಂದ ಕೆ.ಆರ್.ಪುರಂನ ಔಟರ್ ರಿಂಗ್ ರೋಡ್(ಹೊರ ವರ್ತಲ ರಸ್ತೆ-ಓಆರ್‍ಆರ್) ಮೆಟ್ರೋ ಮಾರ್ಗ (ಮೆಟ್ರೋ ಯೋಜನೆಯ 2ಎ ಹಂತ) ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಬಿಎಂಆರ್‍ಸಿಎಲ್‍ನ ಈ ಯೋಜನೆಯನ್ನು 5,994.90 ಕೋಟಿ ರೂ.ಗಳ ಪರಿಷ್ಕøತ ಅಂದಾಜು ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಸರ್ಕಾರ ಆದೇಶ ಹೊರಡಿಸಿದೆ.2023ರ ಡಿಸೆಂಬರ್ ಒಳಗೆ ಈ ಮಹತ್ವದ ಯೋಜನೆಯನ್ನು ಪೂರ್ಣಗೊಳಿಸಲು ಸರ್ಕಾರ ಅವಧಿ ನಿಗದಿಗೊಳಿಸಿದೆ.
ಓಆರ್‍ಆರ್‍ಗಾಗಿ ಹಣಕಾಸು ಯೋಜನೆ ಮತ್ತು ಸಂಬಂಧಪಟ್ಟ ಇತರ ಪ್ರಮುಖ ಕಾರ್ಯಗಳಿಗೂ ರಾಜ್ಯ ಸರ್ಕಾರ ಅಂಗೀಕಾರ ನೀಡಿದೆ.
ಈ ಯೋಜನೆಗಾಗಿ ಕೇಂದ್ರ ಸರ್ಕಾರ 1.043.90 ಕೋಟಿ ರೂ.ಗಳನ್ನು ಹಾಗೂ ರಾಜ್ಯ ಸರ್ಕಾರ 1,819 ಕೋಟಿ ರೂ.ಗಳನ್ನು ನೀಡಲಿದ್ದು, ಉಳಿದ ಮೊತ್ತವನ್ನು ಅನುದಾನ, ಸಾಲ ಮತ್ತು ಅನ್ವೇಷಣಾತ್ಮಕ ಆರ್ಥಿಕ ನೆರವು ಮೂಲಕ ಪಡೆಯಲಾಗುವುದು ಎಂದು ಸರ್ಕಾರ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಮೆಟ್ರೋ ನೀತಿ-2017ರಲ್ಲಿ ರೂಪಿಸಲಾದ ಬಂಡವಾಳ ಹೂಡಿಕೆ ಪಾಲು ಜಂಟಿ ಸಹಭಾಗಿತ್ವದ ಅಡಿ ಕೇಂದ್ರ ಸರ್ಕಾರದಿಂದ ಹಣಕಾಸು ನೆರವು ಪಡೆಯಲಾಗುತ್ತದೆ. ಹಾಗೆಯೇ ಹಂತ-1 ಮತ್ತು ಹಂತ-2ರಲ್ಲಿ ನೆರವು ನೀಡಿದ್ದ ಕೇಂದ್ರ ಸರ್ಕಾರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಿಂದಲೂ ನೆರವು ಪಡೆಯಲಾಗುವುದು.
ಕೇಂದ್ರ ಸರ್ಕಾರದಿಂದ ಸಾಲದ ನೆರವು ಮೂಲಕ ಹಣಕಾಸು ಸೌಲಭ್ಯ ಪಡೆಯಲು ಬಹುಪಕ್ಷೀಯ ಮತ್ತು ದ್ವಿಪಕ್ಷೀಯ ಅಭಿವೃದ್ದಿ ಸಂಸ್ಥೆಗಳ ಸಹಾಯವನ್ನು ಸಹ ಕೋರಲಾಗುತ್ತದೆ.
ಈ ಮಹತ್ವದ ಯೋಜನೆಗಾಗಿ ಭೂ ಸ್ವಾಧೀನ ಮತ್ತು ಈ ಮಾರ್ಗದಲ್ಲಿರುವ ವಸತಿ ಮತ್ತು ಇತರ ಕಟ್ಟಡಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಬಾಕಿ ಇರುವ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಲಾಗುವುದು.
ಕೇಂದ್ರ ಸರ್ಕಾರದ ಅನುಮೋದನೆ ನಂತರ ಸಿವಿಲ್ ಕಾಮಗಾರಿಗಳು ಆರಂಭವಾಗಲಿದೆ ಹಾಗೂ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಹಣಕಾಸು ಸೌಲಭ್ಯಕ್ಕಾಗಿ ಸೂಕ್ತ ವ್ಯವಸ್ಥೆ ಮಾಡಲಾಗುವುದು.
ಈ ಯೋಜನೆಯನ್ನು ಕಾರ್ಯಗತಗೊಳಿಸುವಲ್ಲಿ ಎದುರಾಗುವ ಅಡ್ಡಿಗಳನ್ನು ಸುಗಮ ಮತ್ತು ಕ್ಷಿಪ್ರವಾಗಿ ಬಗೆಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಮೆಟ್ರೋ ನೀತಿ-2017ರ ಅನ್ವಯ ಬಿಎಂಆರ್‍ಸಿಎಲ್ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಯೋಜನಾ ವರದಿ ಮತ್ತು ಇತರ ಅಗತ್ಯ ದಾಖಲೆಪತ್ರಗಳು ಮತ್ತು ದಸ್ತಾವೇಜುಗಳನ್ನು ಸಲ್ಲಿಸಲಿದೆ.ತ್ವರಿತ ಅನುಮೋದನೆಗಾಗಿ ಕೇಂದ್ರದೊಂದಿಗೆ ನಿಕಟ ಸಮನ್ವಯ ಹೊಂದಲಿದೆ.