ಠಾಣೆಯಲ್ಲೇ ಮಹಿಳೆಯೊಬ್ಬವರ ಮೇಲೆ ಹಲ್ಲೆ ಮಾಡಿದ್ದ ಎಎಸ್ಐ ಅಮಾನತು

ಬೆಂಗಳೂರು, ಜ.29- ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯ ಎಎಸ್‍ಐವೊಬ್ಬರು ಠಾಣೆಯಲ್ಲೇ ಮಹಿಳೆ ಮೇಲೆ ಹಲ್ಲೆ ಮಾಡಿ ಹೊರನೂಕಿದ ಅಮಾನವೀಯ ಘಟನೆ ನಡೆದಿದೆ.

ಘಟನೆಗೆ ಸಂಬಂಧಪಟ್ಟಂತೆ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರು ಕುಮಾರಸ್ವಾಮಿ ಲೇಔಟ್ ಠಾಣೆಯ ಎಎಸ್‍ಐ ರೇಣುಕಯ್ಯ ಅವರನ್ನು ಅಮಾನತು ಮಾಡಿದ್ದಾರೆ.

ಈ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎಸಿಪಿ ಅವರಿಗೆ ಅಣ್ಣಾಮಲೈ ಅವರು ಆದೇಶಿಸಿದ್ದಾರೆ.

ಘಟನೆ ವಿವರ: ಆಂಧ್ರ ಮೂಲದ ಮಹಿಳೆಯೊಬ್ಬರು ತನ್ನ 11 ವರ್ಷದ ಮಗಳನ್ನು ತಮ್ಮನಿಗೆ ಕೊಟ್ಟು ವಿವಾಹ ಮಾಡಿದ್ದರು. ಈಗ ಇವರ ಮಗಳಿಗೆ 20 ವರ್ಷವಾಗಿದೆ.ಒಂದು ವರ್ಷದ ಹಿಂದೆ ಗಂಡನನ್ನು ತೊರೆದು ಈಕೆ ಆಂಧ್ರದಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದು ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯ ಕನಕಪುರ ರಸ್ತೆಯ ಹೊಟೇಲ್‍ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಕುಮಾರಸ್ವಾಮಿ ಲೇಔಟ್‍ನಲ್ಲೇ ವಾಸವಾಗಿದ್ದರು.

ಯುವತಿಯ ಪೊಷಕರು ಹಾಗೂ ಸಂಬಂಧಿ ಈಕೆಯನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದು ಜ.19ರಂದು ಆಕೆ ಕೆಲಸ ಮಾಡುತ್ತಿದ್ದ ಹೊಟೇಲ್ ಪತ್ತೆ ಹಚ್ಚಿ ಊರಿಗೆ ಬರುವಂತೆ ಕರೆದಿದ್ದಾರೆ.ಆದರೆ, ಆಕೆ ಊರಿಗೆ ಹೋಗಲು ನಿರಾಕರಿಸಿ ಹೊಟೇಲ್ ಮ್ಯಾನೇಜರ್‍ಗೆ ವಿಷಯ ತಿಳಿಸುತ್ತಾಳೆ.

ಮ್ಯಾನೇಜರ್ ಈ ವಿಷಯವನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರಿಗೆ ತಿಳಿಸಿದಾಗ ಪೊಲೀಸರು ಸ್ಥಳಕ್ಕೆ ಬಂದು ಆಕೆಯನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ, ನನಗೆ 20 ವರ್ಷವಾಗಿದೆ.ನಾನು ಇಲ್ಲೇ ಕೆಲಸ ಮಾಡಿಕೊಂಡು ಸ್ವತಂತ್ರವಾಗಿ ಬದುಕುವುದಾಗಿ ಹೇಳುತ್ತಾಳೆ.

ಇತ್ತ ಯುವತಿಯ ತಾಯಿ ಹಾಗೂ ಸಂಬಂಧಿ ಠಾಣೆಗೆ ಬಂದು ಮಗಳನ್ನು ಕರೆದೊಯ್ಯಲು ಯತ್ನಿಸುತ್ತಾರೆ.ಈ ವೇಳೆ ಪೊಲೀಸರು ಹಾಗೂ ಮಹಿಳೆಯರ ಮಧ್ಯೆ ವಾಗ್ವಾದ ನಡೆದಿದೆ.

ಮಗಳನ್ನು ತಮ್ಮೊಂದಿಗೆ ಕಳುಹಿಸದಿದ್ದರೆ ವಿಷ ಕುಡಿಯುವುದಾಗಿ ಹೇಳಿ ಮಹಿಳೆ ಗಲಾಟೆ ಮಾಡಿದಾಗ ಮಹಿಳಾ ಪೊಲೀಸರು ಆಕೆಯನ್ನು ನಿಯಂತ್ರಿಸಲು ಮುಂದಾದರಾದರೂ ಸಾಧ್ಯವಾಗಿಲ್ಲ.

ಈ ಸಂದರ್ಭದಲ್ಲಿ ಠಾಣೆಗೆ ಬಂದ ಎಎಸ್‍ಐ ರೇಣುಕಯ್ಯ ಅವರು ಗಲಾಟೆ ಮಾಡುತ್ತಿದ್ದ ಮಹಿಳೆ ಜತೆ ವಾಗ್ವಾದ ನಡೆಸಿ ಆಕೆ ಮೇಲೆ ಹಲ್ಲೆ ಮಾಡಿ ಹೊರಗೆ ದಬ್ಬಿದ್ದಾರೆ.

ಈ ಘಟನೆ ಬೆಳಕಿಗೆ ಬಂದ ನಂತರ ಎಎಸ್‍ಐ ರೇಣುಕಯ್ಯ ಅವರನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸಲಾಗಿದೆ.

ಹಲ್ಲೆ ಮಾಡಿದ್ದು ತಪ್ಪು: ಠಾಣೆಯಲ್ಲಿ ಮಹಿಳೆ ಮೇಲೆ ಹಲ್ಲೆ ನಡೆದಿರುವುದು ತಪ್ಪು. ಈ ಪ್ರಕರಣವನ್ನುಗಂಭೀರವಾಗಿ ಪರಿಗಣಿಸಲಾಗಿದೆ.ಜ.19ರಂದು ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಸ್‍ಐ ರೇಣುಕಯ್ಯ ಅವರನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ತಿಳಿಸಿದ್ದಾರೆ.

ನಾಗಲಕ್ಷ್ಮಿಬಾಯಿ ಪ್ರತಿಕ್ರಿಯೆ: ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಪೊಲೀಸರು ಠಾಣೆಗೆ ಬಂದ ಮಹಿಳೆ ಮೇಲೆ ಹಲ್ಲೆ ನಡೆಸಿ ಅವರನ್ನು ಹೊರಗೆ ದಬ್ಬುವ ಮೂಲಕ ಅಮಾನವೀಯತೆಯಿಂದ ವರ್ತಿಸಿದ್ದಾರೆ.ಸಂಜೆ ವೇಳೆಗೆ ನಾನು ಠಾಣೆಗೆ ತೆರಳಿ ಪರಿಶೀಲಿಸಿ ಸ್ವಯಂಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ