ಬೆಂಗಳೂರು, ಜ.29- ಕಾಂಗ್ರೆಸ್ ಪಕ್ಷದ ಜತೆ ಮುನಿಸಿಕೊಂಡು ಪಕ್ಷದ ಚಟುವಟಿಕೆಗಳಿಂದ ಸಂಪೂರ್ಣವಾಗಿ ವಿಮುಖರಾಗಿರುವ ಕಲಬುರ್ಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಉಮೇಶ್ ಜಾಧವ್ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ.
ಯಾವುದೇ ಸಂದರ್ಭದಲ್ಲೂ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಾಗಿದ್ದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಲಬುರ್ಗಿ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಡಾ.ಉಮೇಶ್ ಜಾಧವ್ ರಾಜೀನಾಮೆಯಿಂದ ತೆರವಾಗಲಿರುವ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಮಾಜಿ ಸಚಿವ ಸುನಿಲ್ ವಲ್ಯಾಪುರೆ ಇಲ್ಲವೇ ಉಮೇಶ್ ಜಾಧವ್ ಅವರ ಸಹೋದರ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಈಗಾಗಲೇ ಕ್ಷೇತ್ರದ ಮುಖಂಡರ ಜತೆ ಹಲವು ಸುತ್ತಿನ ಮಾತುಕತೆ ನಡೆಸಿರುವ ಉಮೇಶ್ ಜಾಧವ್ ಬಿಜೆಪಿ ಸೇರುವ ಇಂಗಿತವನ್ನು ಹೊರ ಹಾಕಿದ್ದಾರೆ.ತಾವು ಯಾವ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬಿಡುತ್ತಿದ್ದೇನೆ ಎಂಬುದನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಟ್ಟಿರುವ ಅವರು, ಕಾಂಗ್ರೆಸ್‍ನಲ್ಲೇ ಉಳಿದರೆ ರಾಜಕೀಯ ಭವಿಷ್ಯವಿಲ್ಲ. ಪ್ರಭಾವಿ ಸಚಿವರೊಬ್ಬರು ತಮಗೆ ಎಲ್ಲಾ ರೀತಿಯಲ್ಲೂ ಅಡ್ಡಗಾಲು ಹಾಕುತ್ತಿದ್ದು, ಈ ಕಾರಣಕ್ಕಾಗಿಯೇ ಪಕ್ಷ ಬಿಡುವ ತೀರ್ಮಾನಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ಇತ್ತ ಬಿಜೆಪಿ ಕೂಡ ಉಮೇಶ್ ಜಾದವ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ತುದಿಗಾಲಲ್ಲಿ ನಿಂತಿದೆ.ಕಲಬುರ್ಗಿ ಮೀಸಲು ಲೋಕಸಭಾ ಕ್ಷೇತ್ರದಿಂದ ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜಾಧವ್ ಸಮರ್ಥವಾದ ಅಭ್ಯರ್ಥಿಯಾಗಲಿದ್ದಾರೆ ಎಂಬುದು ಕಮಲ ನಾಯಕರ ಲೆಕ್ಕಾಚಾರ.ಜಿಲ್ಲೆಯಲ್ಲಿ ಲಂಬಾಣಿ ಸಮುದಾಯ ಹಾಗೂ ವೀರಶೈವ ಮತಗಳು ನಿರ್ಣಾಯಕ ವಾಗಿರುವುದರಿಂದ ಉಮೇಶ್ ಜಾಧವ್ ಬಿಜೆಪಿಗೆ ಬಂದರೆ ಖರ್ಗೆಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ.ಅವರ ಸೇರ್ಪಡೆಯಿಂದಾಗಿ ಕಾಂಗ್ರೆಸ್‍ಗೆ ಸರಿಯಾದ ಪೈಪೋಟಿ ನೀಡಬಹುದೆಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.
ಬಜೆಟ್ ಅಧಿವೇಶನಕ್ಕೂ ಮುನ್ನ ಇಲ್ಲವೇ ನಂತರ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.ಕೆಲ ದಿನಗಳ ಹಿಂದೆ ಕ್ಷೇತ್ರದಲ್ಲಿ ತಮ್ಮ ತಂದೆಯವರ ಪುಣ್ಯಸ್ಮರಣೆ ಕಾರ್ಯಕ್ರಮದ ವೇಳೆ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆದಿದ್ದು, ನಾನು ಯಾವುದೇ ರೀತಿಯ ಆಮಿಷಗಳಿಗೆ ಬಲಿಯಾಗದೆ ಕಾಂಗ್ರೆಸ್‍ನ ಕೆಲ ಬೆಳವಣಿಗೆಗಳಿಂದ ಬೇಸತ್ತು ಪಕ್ಷ ಬಿಡುತ್ತಿದ್ದೇನೆ ಎಂದು ತಿಳಿಸಿರುವುದಾಗಿ ಮೂಲಗಳು ಖಚಿತ ಪಡಿಸಿವೆ.
ಗೊಂದಲದಲ್ಲಿ ಬಿಜೆಪಿ:
ಇನ್ನು ಆಪರೇಷನ್ ಕಮಲಕ್ಕೆ ಒಳಗಾಗಲಿದ್ದಾರೆ ಎಂದು ಹೇಳಲಾಗಿದ್ದ ಬಳ್ಳಾರಿ ಜಿಲ್ಲೆ ಕಂಪ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೆ.ಗಣೇಶ್ ಅವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ಪಕ್ಷದಲ್ಲೇ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಲ್ಟನ್ ರೆಸಾರ್ಟ್‍ನಲ್ಲಿ ಗಣೇಶ್, ವಿಜಯನಗರ ಕ್ಷೇತ್ರದ ಶಾಸಕ ಆನಂದ್‍ಸಿಂಗ್ ಮೇಲೆ ನಡೆಸಿರುವ ಮಾರಣಾಂತಿಕ ಹಲ್ಲೆ.ನಂತರ ನಡೆದ ಬೆಳವಣಿಗೆಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಕಾಂಗ್ರೆಸ್‍ಗೆ ಭಾರೀ ಇರಿಸು-ಮುರಿಸು ಉಂಟು ಮಾಡಿತ್ತು.ಡ್ಯಾಮೆಜ್ ಕಂಟ್ರೋಲ್ ಮಾಡಲು ಮುಂದಾಗಿದ್ದ ಕಾಂಗ್ರೆಸ್ ಅವರನ್ನು ಪಕ್ಷದಿಂದ ಅಮಾನತು ಪಡಿಸಿ ಕಾನೂನಿನ ಪ್ರಕಾರವೇ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ಸೂಚನೆ ನೀಡಿದೆ.
ಪೊಲೀಸರು ಗಣೇಶ್ ವಿರುದ್ಧ ಮೊಕದ್ದಮೆ ದಾಖಲಿಸಿದ ಬಳಿಕ ಅವರು ಎಲ್ಲಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಮೊಬೈಲ್ ಕೂಡ ಸಂಪರ್ಕಕ್ಕೆ ಸಿಗದೆ ಪೊಲೀಸರು ಮುಂಬೈ, ಪೂನಾ, ಬೆಂಗಳೂರು ಸೇರಿದಂತೆ ನಾನಾ ಕಡೆ ಹುಡುಕಾಟ ನಡೆಸುತ್ತಿದ್ದಾರೆ.
ಆದರೆ, ಗಣೇಶ್ ಈಗಲೂ ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗುತ್ತಿದೆ.ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಕಾಂಗ್ರೆಸ್‍ಗೆ ಬಂದ ಸ್ಥಿತಿ ನಮಗೂ ಬರಬಹುದು.ನಾಳೆ ನಾವು ಆನಂದ್‍ಸಿಂಗ್ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮೇಲೆ ದಾಳಿ ನಡೆಸಲು ಮುಂದಾದರೆ ತಿರುಗು ಬಾಣವಾಗಬಹುದೆಂಬ ಭೀತಿ ಪಕ್ಷದ ನಾಯಕರಲ್ಲಿದೆ.
ಹೀಗಾಗಿ ಅವರ ಸೇರ್ಪಡೆಗೆ ಕೆಲವರು ವಿರೋಧ ವ್ಯಕ್ತಪಡಿಸಿದರೆ, ಬೆರಳೆಣಿಕೆಯ ಮುಖಂಡರು ಮಾತ್ರ ರಾಜಕೀಯದಲ್ಲಿ ಇದೆಲ್ಲಾ ಸರ್ವೆ ಸಾಮಾನ್ಯ.ಜನರು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬ ಸಮರ್ಥನೆ ನೀಡುತ್ತಿದ್ದಾರೆ.